ಧಾರವಾಡ: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಧಾರವಾಡ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಶಾಸಕ ಅಮೃತ ದೇಸಾಯಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಶಿವಳ್ಳಿ ಗ್ರಾಮದ ರೈತರಾದ ಮಾಯಪ್ಪ ಕುಪ್ಪಣ್ಣವರ ಮತ್ತು ಬಸವರಾಜ ಮೊರಬದ ಅವರ ಹೊಲಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಟಿಯಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ರೈತರ ಹೊಲದಲ್ಲಿನ ಮುಂಗಾರು ಹಂಗಾಮಿನ ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಹಿಂಗಾರು ಹಂಗಾಮಿನ ಗೋಧಿ, ಕಡಲೆ, ಜೋಳ, ಈರುಳ್ಳಿ ಇನ್ನಿತರ ಬೆಳೆಗಳು ಬಹುತೇಕ ನಾಶವಾಗಿವೆ. ಅಲ್ಲದೇ ಹಲವೆಡೆ ರಸ್ತೆಗಳು ಸಹ ಹಾನಿಗೊಂಡಿವೆ.
ಹೀಗಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಯಾವುದೇ ಸರ್ಕಾರ ಇದ್ದರೂ ರೈತನ ನಷ್ಟ ಭರಿಸಲು ಸಾಧ್ಯವಿಲ್ಲ. ಆದಾಗ್ಯೂ ನಮ್ಮ ಸರ್ಕಾರ ರೈತರಿಗೆ ಸೂಕ್ತ ನೆರವು ನೀಡಲು ಸಿದ್ಧವಿದೆ. ಈ ದಿಸೆಯಲ್ಲಿ ತಾವು ಕೂಡ ಶಕ್ತಿ ಮೀರಿ ರೈತರಿಗೆ ನೆರವು ಒದಗಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
ಇನ್ನೊಂದೆಡೆ ಪುಷ್ಪ ಕೃಷಿ ಕೈಕೊಂಡಿರುವ ಕುರುಬಗಟ್ಟಿ, ಮಂಗಳಗಟ್ಟಿ, ಲೋಕೂರು, ಶಿಬಾರಗಟ್ಟಿ ಇನ್ನಿತರ ಗ್ರಾಮಗಳ ರೈತರಿಗೆ ಮಳೆಯಿಂದ ಹಾನಿಯಾಗಿದೆ. ನಾಳೆ ಆ ಗ್ರಾಮಗಳ ರೈತರ ಹೊಲಗಳಿಗೂ ಭೇಟಿ ನೀಡುವುದಾಗಿ ಶಾಸಕರು ತಿಳಿಸಿದರು.
ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ಧಾರವಾಡ ತಾಲೂಕಿನಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಎಂಜಿನಿಯರ್ ಇರುವ ತಂಡಗಳು ಪ್ರತಿದಿನ ಸಮೀಕ್ಷೆ ಕಾರ್ಯ ನಡೆಸುತ್ತಿವೆ. ನವೆಂಬರ್ 25 ರವರೆಗೆ ಮಾಡಿದ ಸಮೀಕ್ಷೆ ಪ್ರಕಾರ ಧಾರವಾಡ ಹೋಬಳಿಯಲ್ಲಿ 5429.20, ಅಮ್ಮಿನಭಾವಿ ಹೋಬಳಿಯಲ್ಲಿ 9839.36 ಮತ್ತು ಗರಗ ಹೋಬಳಿಯಲ್ಲಿ 3463.25 ಹೆಕ್ಟೇರ್ ಸೇರಿದಂತೆ ಒಟ್ಟು ಧಾರವಾಡ ತಾಲೂಕಿನಲ್ಲಿ 18731.81 ಹೆಕ್ಟೇರ್ ಜಮೀನದಲ್ಲಿರುವ ಭತ್ತ, ಗೋವಿನ ಜೋಳ, ಜೋಳ, ಉದ್ದು, ಹೆಸರು, ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಹೂವು ಬೆಳೆ ನಾಶವಾಗಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಡಾ ಸಂತೋಷ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಸಿ.ಜಿ.ಮೇತ್ರಿ, ಅಮ್ಮಿನಭಾವಿ ಹೋಬಳಿ ಕಂದಾಯ ನಿರೀಕ್ಷಕ ಆನಂದ ಆನಿಕಿವಿ ಹಾಗೂ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಮಾರಡಗಿ, ಕೋಟೂರು, ಗುಳೇದಕೊಪ್ಪ ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ, ಮಳೆಯಿಂದ ಹಾಳಾದ ಹೊಲ ಮತ್ತು ಬೆಳೆ, ರಸ್ತೆ, ಸೇತುವೆಗಳನ್ನು ಪರಿಶೀಲಿಸಿದರು.
Kshetra Samachara
26/11/2021 03:27 pm