ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ವತಿಯಿಂದ ಆಯೋಜಿಸಲಾಗಿರುವ "ನಮ್ಮ ನಗರ ಸ್ವಚ್ಛ ನಗರ" ಅಭಿಯಾನದ ಅಂಗವಾಗಿ ಧಾರವಾಡಕ್ಕೆ ಭೇಟಿ ನೀಡಿದ ಪಾಲಿಕೆಯ ಸ್ವಚ್ಛತಾ ರಾಯಭಾರಿಗಳಾದ ಅನಿರುದ್ಧ ಜತ್ಕರ್ ಅವರು ಹುಬ್ಬಳ್ಳಿ-ಧಾರವಾಡದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ನಗರ ಸ್ವಚ್ಛತೆಯ ಕಾರ್ಯವಿಧಾನ, ನಗರ ಸ್ವಚ್ಛತೆ ಕುರಿತಾಗಿ ನಾಗರಿಕರ ಅವಶ್ಯಕತೆ ಹಾಗೂ ಅವರ ಸಹಭಾಗಿತ್ವ ಹಾಗೂ ಪ್ರಮುಖವಾಗಿ ಪೌರಕಾರ್ಮಿಕರ ಸುರಕ್ಷಾ ವಿಷಯವಾಗಿ ನಗರ ವೀಕ್ಷಣೆಯನ್ನು ಮಾಡಿದರು.
ಮೊಟ್ಟ ಮೊದಲಾಗಿ, ಹುಬ್ಬಳ್ಳಿಯ ಡಾಲರ್ಸ್ ಕಾಲೊನಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ವೀಕ್ಷಿಸಿ, ಸಾರ್ವಜನಿಕರಿಗೆ ಕಸ ವಿಂಗಡಣೆ ಹಾಗೂ ಮನೆ ಅವರಣದಲ್ಲಿ ಗೊಬ್ಬರ ತಯಾರಿಸುವ ವಿಧಾನಗಳ ಕುರಿತು ಸಹಾಯಕ ಆಯುಕ್ತರು, ವಲಯ ಕಚೇರಿ 7ರ ಸಹಾಯಕ ಆಯುಕ್ತ ಗಿರೀಶ್ ತಳವಾರ್, ಪರಿಸರ ಅಭಿಯಂತರರಾದ ಕುಮಾರಿ ಜ್ಯೋತಿ ಬಿ.ಹೆಚ್ ಪ್ರದರ್ಶನ ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಾಲಿಕೆಯ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷಾ ದಿರಿಸುಗಳ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಸಿಕೊಟ್ಟರು.
ತದನಂತರ, ಬೆಂಗೇರಿಯಲ್ಲಿನ ಕಂಪಾಕ್ಟ ಸ್ಟೇಷನ್ನಲ್ಲಿ ದ್ವಿತೀಯ ಹಂತದ ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಸ್ಥಾಪಿಸಿರುವ ಯಂತ್ರೋಪಕರಣಗಳ ಕಾರ್ಯ ವೀಕ್ಷಿಸಿದರು.
ಅಲ್ಲಿಂದ ಧಾರವಾಡದ ಹೊಸ ಯಲ್ಲಾಪುರದಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಶಅನಿರುದ್ಧ ಜತ್ಕರ್ ಅವರು ಯೋಜನೆಯನ್ನು ಶ್ಲಾಘಿಸಿದರು. ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಕುರಿತು ಘನತ್ಯಾಜ್ಯ ವಸ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಸಂತೋಷ್ ಯರಂಗಳಿ ರವರು ಸವಿಸ್ತಾರವಾಗಿ ವಿವರಿಸಿದರು. ಅದೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಲಿಕೆಯ ಪೌರಕಾರ್ಮಿಕರು ಹಾಗೂ ಇತರೆ ಸಿಬ್ಬಂದಿಗಳನ್ನು ಮಾತನಾಡಿಸಿದರು.
Kshetra Samachara
23/06/2022 08:16 pm