ಧಾರವಾಡ: ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಕೊನೆಗೊಂಡಿದ್ದು, ನಾಮಪತ್ರ ಹಿಂಪಡೆಯುವ ದಿನಾಂಕದ ನಂತರ ಪ್ರಚಾರ ಕಾರ್ಯ ಹೆಚ್ಚಳವಾಗುತ್ತದೆ. ಪಾರದರ್ಶಕ ಮತ್ತು ಭಾರತೀಯ ಚುನಾವಣಾ ಆಯೋಗದ ನಿಯಮಗಳ ಪಾಲನೆ ಕುರಿತು ಖಚಿತಪಡಿಸಿಕೊಳ್ಳಲು ಎಲ್ಲ ತಂಡಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಎಂಸಿಸಿ ತಂಡದ ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ಜಿ.ಪಂ.ಸಿಇಓ ಡಾ.ಸುಶೀಲ.ಬಿ., ಹೇಳಿದರು.
ಇಂದು ಸಂಜೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿಎಸ್‌ಟಿ, ಎಂಸಿಎಂಸಿ, ಎಫ್ಎಸ್‌ಟಿ, ವಿವಿಟಿ ತಂಡಗಳ ಅಧಿಕಾರಿಗಳ ಜೊತೆ ಸಭೆ ಜರುಗಿಸಿ, ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಭ್ಯರ್ಥಿಯು ಸಂಘಟಿಸುವ ಪ್ರಚಾರ, ಸಭೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಅನುಮತಿ ಪಡೆದಿರುವುದು ಮುಖ್ಯವಾಗಿದೆ. ಈ ಸಂದರ್ಭದಲ್ಲಿ ವೀಡಿಯೋ ರೆಕಾರ್ಡಿಂಗ್ ತಂಡ ಪ್ರತಿಯೊಂದನ್ನು ರೆಕಾರ್ಡ್ ಮಾಡಿರಬೇಕು. ಪ್ರತಿ ತಂಡವು ಪ್ರತಿದಿನ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ, ವರದಿ ನೀಡಬೇಕು. ಅಬಕಾರಿ ಇಲಾಖೆಯವರು ಇನ್ನಷ್ಟು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಅಬಕಾರಿ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆ ಮೇಲೆ ಕಾರ್ಯ ನಿರ್ವಹಿಸಬೇಕು. ಚುನಾವಣೆಯಲ್ಲಿ ಯಾವುದೇ ರೀತಿಯ ಚುನಾವಣಾ ನಿಯಮಗಳು ಉಲ್ಲಂಘಣೆ ಆಗದಂತೆ ಪ್ರತಿ ತಂಡ ಎಚ್ಚರಿಕೆ ವಹಿಸಿಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ ಅವರು ಪ್ರಾತ್ಯಕ್ಷಿಕೆ ಮೂಲಕ ವಿವಿಧ ತಂಡಗಳ ಅಧಿಕಾರಿಗಳಿಗೆ ತರಬೇತಿ ನೀಡಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು, ವಿ.ಎಸ್ ಟಿ, ಎಫ್ಎಸ್‌ಟಿ, ಎಂಸಿಎಂಸಿ ತಂಡದ ಸದಸ್ಯರು ಭಾಗವಹಿಸಿದ್ದರು.
Kshetra Samachara
24/11/2021 05:30 pm