ಧಾರವಾಡ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿಕಾಸಕ್ಕಾಗಿ ಸರ್ಕಾರ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು ಸಮಾಜದ ಜನರು ಅವುಗಳ ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ ಹೇಳಿದರು.
ಧಾರವಾಡದ ದೊಡ್ಡನಾಯಕನಕೊಪ್ಪದ ಎಸ್.ಟಿ.ವಿದ್ಯಾರ್ಥಿನಿಯರ ವಸತಿನಿಲಯದಲ್ಲಿಂದು ಸಂಜೆ ಮಹರ್ಷಿ ವಾಲ್ಮೀಕಿ ಜಯಂತಿ ಮುನ್ನಾದಿನ ಏರ್ಪಡಿಸಿದ್ದ ವಿಚಾರ ಸಂಕಿರಣ ಹಾಗೂ ಸರ್ಕಾರದ ಯೋಜನೆಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗಾಗಿ ಹಲವಾರು ಶೈಕ್ಷಣಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಒಳಪಂಗಡಗಳ ಅಂತರಜಾತಿ ವಿವಾಹ, ದೇವದಾಸಿಯರ ಮಕ್ಕಳ ವಿವಾಹ ಪ್ರೋತ್ಸಾಹ ಧನ, ಶಿಷ್ಯವೇತನ ಸೇರಿದಂತೆ ಅನೇಕ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಜನರು ಅವುಗಳ ಪ್ರಯೋಜನ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.
ಮುಖಂಡ ಮಹಾದೇವ ದೊಡ್ಡಮನಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಓರ್ವ ತಪಸ್ವಿ ಆತ ಅಧ್ಯಯನದಿಂದ ಅಕ್ಷರ ಸಾಧನೆ ಮಾಡಿದ್ದಾನೆ. ಆತನ ಚರಿತ್ರೆಯನ್ನು ತಪ್ಪಾಗಿ ಅರ್ಥೈಸಿ ಆತನೊಬ್ಬ ದರೋಡೆಕೋರ, ಕಳ್ಳ ಎಂದು ಸುಳ್ಳು ಹೇಳಿಕೊಂಡು ಬರಲಾಗುತ್ತಿದೆ. ಈ ಕುರಿತು 2009 ರಲ್ಲಿ ಪಂಜಾಬ ಉಚ್ಛ ನ್ಯಾಯಾಲಯವು ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ಸ್ಪಷ್ಟ ತೀರ್ಪು ನೀಡಿದ್ದು. ಕ್ರಿ.ಪೂ.3 ರಿಂದ 5 ನೇ ಶತಮಾನದ ಮಧ್ಯದಲ್ಲಿ ಬಾಳಿದ ಮಹರ್ಷಿ ವಾಲ್ಮೀಕಿ ಓರ್ವ ಋಷಿ ಎಂದು ಮಾತ್ರ ಕ್ರಿ.ಶ.9 ನೇ ಶತಮಾನದವರೆಗಿನ ದಾಖಲೆಗಳು ಹೇಳುತ್ತವೆ. ನಂತರದ ಕಾಲಘಟ್ಟದಲ್ಲಿನ ಕೆಲವು ಪುರಾಣಗಳಲ್ಲಿ ವ್ಯವಸ್ಥಿತವಾಗಿ ಸುಳ್ಳನ್ನು ಪ್ರಚುರಪಡಿಸಲಾಗಿದೆ ವಿದ್ಯಾರ್ಥಿಗಳು ಇಂತಹ ವಿಚಾರಗಳನ್ನು ಅರಿಯಬೇಕು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮಾತನಾಡಿ, ಅಕ್ಷರದಿಂದ ದೂರ ಇರಿಸಲ್ಪಟ್ಟ ಸಮಾಜದ ಕೆಳಸ್ತರದ ವ್ಯಕ್ತಿಯೊಬ್ಬ ಸತತ ಪರಿಶ್ರಮ, ಏಕಾಗ್ರತೆಯಿಂದ ತಪಸ್ಸು ಮಾಡಿ ಅಕ್ಷರ, ಜ್ಞಾನ ಸಿದ್ಧಿ ಮಾಡಿಕೊಂಡು ಜಗತ್ತಿಗೆ ರಾಮಾಯಣದಂತಹ ಮಹಾಕಾವ್ಯ ನೀಡಿದ್ದಾನೆ. ಎಲ್ಲಾ ಮಹಾನ್ ವ್ಯಕ್ತಿಗಳ ಜಯಂತಿಗಳ ಆಚರಣೆ ಸಂದರ್ಭದಲ್ಲಿ ಅವರನ್ನು ವಿದ್ಯಾರ್ಥಿಗಳಿಗೆ, ಯುವಜನರಿಗೆ ಅರ್ಥಮಾಡಿಸುವ ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆ, ಭಾಷಣ, ಕ್ವಿಜ್ ಏರ್ಪಡಿಸಬೇಕು ಎಂದರು.
ವಿದ್ಯಾರ್ಥಿನಿಯರಾದ ಕೀರ್ತಿ ಮ್ಯಾಗೇರಿ,ಅಶ್ವಿನಿ ತಳವಾರ ಮಾತನಾಡಿದರು. ನಂತರ ರೂಪಕ ಪ್ರಸ್ತುತ ಪಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ, ನಿಲಯಪಾಲಕರಾದ ಜ್ಯೋತಿ, ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/10/2021 10:15 pm