ಲಕ್ಷ್ಮೇಶ್ವರ: ಸತತ ಮಳೆಯಿಂದಾಗಿ ಅಡರಕಟ್ಟಿ ಸೇರಿದಂತೆ ತಾಲೂಕಿನಲ್ಲಿ ಬೆಳೆದ ಈರುಳ್ಳಿ ಹಾಳಾಗುವುದಲ್ಲದೇ ನಾನಾ ರೋಗ ಬಾಧೆ ಉಂಟಾಗಿದೆ. ಬೆಲೆಯೂ ರೈತರನ್ನು ಅಧೀರರನ್ನಾಗಿಸಿದೆ. ಕಳೆದ ವರ್ಷವಿದ್ದ ಬೆಲೆ ಈಗಿಲ್ಲ. ಕಳೆದ ತಿಂಗಳಷ್ಟೆ ಕ್ವಿಂಟಲ್ಗೆ 2,500 ರಿಂದ 3 ಸಾವಿರ ರೂ. ವರೆಗೆ ಮಾರಾಟವಾಗುತ್ತಿತ್ತು. ದಿಢೀರ್ ಕುಸಿತಕಂಡು 3000 ರಿಂದ 2000 ಸಾವಿರ ರೂ. ವರೆಗೆ ಮಾರಾಟವಾಗುತ್ತಿದ್ದರಿಂದ ರೈತರು ಆತಂಕಕ್ಕೆ ಸಿಲುಕಿದ್ದಾರೆ.
ಸತತ ಮಳೆಯಿಂದ ತಾಲೂಕಿನ ಅಡರಕಟ್ಟಿ ಗ್ರಾಮದ ರೈತ ಯಲ್ಲಪ್ಪ ಕದಡಿ, ಸೊಮಣ್ಣ ಭಂಗಿ ಬೆಳೆದ ಈರುಳ್ಳಿ ಬೆಳೆಗೆ ಬೆಲೆಯಿಲ್ಲದೇ ಕೆಂಗಟ್ಟು ಬೆಳೆಗಳನ್ನು ಸಂಪೂರ್ಣ ನಾಶಪಡಿಸುತ್ತಿದ್ದಾರೆ. ಮೊದಲು ಮೆಕ್ಕೆಜೋಳ, ಶೇಂಗಾ, ಹತ್ತಿ ಬೀಜ ಬಿತ್ತನೆ ಮಾಡುತ್ತಿದ್ದರು. ಈಗ ಈರುಳ್ಳಿ ಬೀಜ ಬಿತ್ತನೆ ಜೋರು ನಡೆದಿದೆ. ದರ ಹೆಚ್ಚಿ ಕೈ ತುಂಬ ಲಾಭ ತರುತ್ತದೆ ಎನ್ನುವ ನಂಬಿಕೆ ಇತ್ತು. ಈ ವರ್ಷ ಈ ನಂಬಿಕೆ ಹುಸಿಯಾಗಿದೆ.
ಹರದಗಟ್ಟಿ, ಅಡರಕಟ್ಟಿ, ಕೊಂಡಿಕೊಪ್ಪ, ಸೂರಣಗಿ, ದೊಡ್ಡೂರ ಸೇರಿದಂತೆ ನಾನಾ ಗ್ರಾಮಗಳ ರೈತರು, ಹೆಚ್ಚಾಗಿ ಈರುಳ್ಳಿ ಬಿತ್ತನೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಸತತ ಸುರಿದ ಮಳೆ, ರೋಗ ಹರಡಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ತಾಲೂಕಿನ ಕೊಳವೆಬಾವಿ ಆಶ್ರಿತ ರೈತರು ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆ ಬೆಳೆಯುತ್ತಿದ್ದಾರೆ. ಕೆ.ಜಿ. ಈರುಳ್ಳಿ ಬಿತ್ತನೆ ಬೀಜಕ್ಕೆ 2 ಸಾವಿರ ರೂ. ವರೆಗೆ ದರ ನೀಡಿ ಬಿತ್ತನೆ ಮಾಡಿದ್ದರು. ಆದರೆ ಬೆಳೆದ ಬೆಳೆ ಸತತ ಸುರಿದ ಮಳೆಗೆ ಬೆಳೆ ಕುಂಠಿತಗೊಂಡಿದೆ. ಲದ್ದಿ ಹುಳದ ಹಾವಳಿ, ಕೊಳೆ ರೋಗ, ಪರ್ಪಲ್ ಬ್ಲಾಚ್ ರೋಗ ತಗುಲಿದೆ. ಮೊದಲಿಗಿಂತ ಕಡಿಮೆ ಬೆಲೆಗೆ ಇದ್ದರೂ ರೈತರು ಅನಿವಾರ್ಯವಾಗಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಮಾಡಿದ ಖರ್ಚು ಕೂಡ ಕೈ ಸೇರುವುದೇ ಇರುವುದು ಅನ್ನದಾತನಿಗೆ ಕಣ್ಣೀರು ತರಿಸಿದೆ.
Kshetra Samachara
06/10/2021 07:21 pm