ಧಾರವಾಡ: ಅದೇನೋ ಅಂತಾರಲ್ಲ ಹೋದೆಯಾ ಪಿಶಾಚಿ ಎಂದರೆ, ಬಂದೆಯಾ ಗವಾಕ್ಷಿ ಎನ್ನುವಂತೆ ವರ್ಷದುದ್ದಕ್ಕೂ ಮಳೆ ರೈತರನ್ನು ಬೆನ್ನು ಬಿದ್ದ ಬೇತಾಳನಂತೆ ಕಾಡುತ್ತಿದೆ. ಮುಂಗಾರು ಒಂದು ರೀತಿಯಾದರೆ ಹಿಂಗಾರು ಮತ್ತೆ ಅಕಾಲಿಕ ಮಳೆಗೆ ತುತ್ತಾಗುತ್ತಿದೆ. ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸತತ ಎರಡು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ.
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ಮಾತಿದೆ. ಆದರೆ, ಬೆನ್ನು ಬಿಡದ ಮಳೆಯಿಂದ ಇದೀಗ ಒಕ್ಕಲಿಗನೇ ಬಿಕ್ಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ವರ್ಷದ ಮುಂಗಾರು ಬೆಳೆಗಳು ಅತಿವೃಷ್ಟಿಯಿಂದಾಗಿ ಹಾನಿಗೀಡಾಗಿದ್ದವು. ಈಗ ಹಿಂಗಾರು ಬೆಳೆಗಳಾದ ಜೋಳ, ಗೋಧಿ ಹಾಗೂ ಕಡಲೆ ಅಕಾಲಿಕ ಮಳೆಗೆ ಸಿಕ್ಕು ಹಾಳಾಗುತ್ತಿವೆ.
ಈಗಾಗಲೇ ಗೋಧಿ, ಜೋಳ ಹಾಗೂ ಕಡಲೆ ಕಟಾವಿಗೆ ಬಂದು ನಿಂತಿವೆ. ಅನೇಕ ರೈತರು ಈಗಾಗಲೇ ಕಟಾವು ಕೂಡ ಮಾಡಿದ್ದಾರೆ. ಆದರೆ, ರಾಶಿ ಮಾಡಬೇಕು ಎಂದುಕೊಳ್ಳುತ್ತಿರುವ ರೈತರಿಗೆ ಈ ಮಳೆ ಮೇಲಿಂದ ಮೇಲೆ ಶಾಕ್ ನೀಡುತ್ತಿದೆ. ಜಿಲ್ಲೆಯ ನಿಗದಿ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆಯಲಾದ ಜೋಳ, ಗೋಧಿ, ಕಡಲೆ, ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಮಸಾಲೆ ಪದಾರ್ಥವಾದ ಬೆಳ್ಳುಳ್ಳಿ, ಎಲ್ಲವೂ ಮಳೆಗೆ ಸಿಲುಕಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಮೋಡ ಕವಿದು ಗುಡುಗು ಸಮೇತ ಮಳೆ ಅಲ್ಲಲ್ಲಿ ಸುರಿಯುತ್ತಿದ್ದು ಕಣಗಳಲ್ಲಿರುವ ಗೋಧಿ ಕಡಲೆಯನ್ನು ಮುಚ್ಚಲು ರೈತರು ಹರಸಾಹಸಪಡುತ್ತಿದ್ದಾರೆ.ಮಳೆಗೆ ಗಲಿಬಿಲಿಗೊಂಡ ರೈತರು ತಮ್ಮ ಫಸಲುಗಳನ್ನು ಮುಚ್ಚಿ ಸಂರಕ್ಷಿಸಿಕೊಳ್ಳಲು ಪ್ರಯಾಸಪಡುವಂತಾಗಿದೆ. ಬೆಳೆದು ನಿಂತ ಜೋಳ, ಕಡಲೆ, ಕುಸುಬೆ, ಗೋಧಿ ಬೆಳೆಗಳು ಮಳೆಗೆ ಸಿಲುಕುತ್ತಿದ್ದು ಜೋಳದ ತೆನೆ ಕಪ್ಪಾಗುವ ಭೀತಿ ಎದುರಾಗಿದೆ.
ಒಟ್ಟಾರೆಯಾಗಿ ರೈತನ ಬದುಕು ಮೂರಾಬಟ್ಟೆಯಾಗುತ್ತಿದ್ದು, ಒಂದು ಕಡೆ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೆ, ಮತ್ತೊಂದು ಕಡೆ ಅಕಾಲಿಕ ಮಳೆಯಿಂದ ಈಗ ಕಷ್ಟ ಪಟ್ಟು ಬೆಳೆದ ಬೆಳೆ ಕೂಡ ಕೈಗೆ ಬರುವಷ್ಟರಲ್ಲಿ ಮಳೆಗೆ ಸಿಲುಕುತ್ತಿರುವುದು ರೈತರಿಗೆ ತೀವ್ರ ಆತಂಕವನ್ನುಂಟು ಮಾಡುತ್ತಿದೆ.
Kshetra Samachara
22/02/2021 08:16 pm