ಹುಬ್ಬಳ್ಳಿ: ಇಡೀ ರಾಜ್ಯದಲ್ಲಿಯೇ ಮಾದರಿಯಾದ ಲಾ ರಿಸರ್ಚರ್ ಆ್ಯಂಡ್ ಸ್ಟಡಿ ಸೆಂಟರ್ ನ್ನು ರೆಡಿ ಮಾಡಿದ್ದು, ಹುಬ್ಬಳ್ಳಿ ವಕೀಲರ ಸಂಘ, ವಿದ್ಯಾರ್ಥಿಗಳು ಸೇರಿ ಕಾನೂನು ಜ್ಞಾನದ ಹಸಿವುಳ್ಳ ಎಲ್ಲರಿಗೂ ಬಹು ಉಪಯುಕ್ತವಾದ ಕೇಂದ್ರವಾಗಲಿದೆ.
ಹೌದು..ಕಾನೂನು ಅರಿಯಬೇಕು, ಸಂಶೋಧನೆ ಮಾಡುವವರಿಗೆ ಇಂಥದೊಂದು ಪುಸ್ತಕ ಸಿಗುತ್ತಿಲ್ಲ ಎಂಬ ಬೇಸರ ಆಗಬಾರದು ಎಂಬ ಆಶಯದಲ್ಲಿ ಈ ಸೆಂಟರ್ ತಲೆ ಎತ್ತಿದೆ. 150 ವರ್ಷಗಳ ಹಿಂದಿನ ಪುಸ್ತಕದಿಂದ ಹಿಡಿದು ತಿಂಗಳು ಪ್ರಕಟವಾಗುವ ಜರ್ನಲ್ ಗಳು ಕೂಡ ಇಲ್ಲಿ ಲಭ್ಯ.
ಹುಬ್ಬಳ್ಳಿ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ವಕೀಲರ ಸಂಘದ 2ನೇ ಮಹಡಿಯಲ್ಲಿ ಈ ಸೆಂಟರ್ ಆರಂಭವಾಗಿದೆ. ಆ.6ರಂದು ವಿದ್ಯುಕ್ತ ಚಾಲನೆ ಸಿಗಲಿದೆ. ರಿಸರ್ಚ್ ಸೆಂಟರ್ ಗೆ ನ್ಯಾಯಾಧೀಶರು, ವಕೀಲರಿಂದ ಪುಸ್ತಕವನ್ನು ದೇಣಿಗೆ ರೂಪದಲ್ಲಿ ಪಡೆದಿರುವುದು ವಿಶೇಷ.
ಕಳೆದ ಫೆಬ್ರವರಿ ತಿಂಗಳಿಂದಲೆ ಇದಕ್ಕಾಗಿ ವಕೀಲರ ಸಂಘ ಅಭಿಯಾನ ನಡೆಸಿತ್ತು. ಹಣ ಬೇಡ, ಒಬ್ಬೊಬ್ಬರಿಂದ ಒಂದು ಪುಸ್ತಕ ನಿರೀಕ್ಷಿಸುತ್ತೇವೆ ಎಂದು ಘೋಷಣೆ ಹೊರಡಿಸಲಾಗಿತ್ತು. ಈವರೆಗೆ ಸುಪ್ರೀಂ ಕೋರ್ಟ್ , ಹೈಕೋರ್ಟ್ ವಕೀಲರು, ನ್ಯಾಯಾಧೀಶರು, ನಿವೃತ್ತರು ಸೇರಿ 430ಕ್ಕೂ ಹೆಚ್ಚಿನವರು ಪುಸ್ತಕ ದಾನ ಮಾಡಿದ್ದಾರೆ. ಬರೋಬ್ಬರಿ 25ಲಕ್ಷ ಮೌಲ್ಯಕ್ಕೂ ಅಧಿಕ ಕಾನೂನು ಗ್ರಂಥಗಳು ಸಂಗ್ರಹವಾಗಿವೆ.
ಪುಸ್ತಕ ಮಾತ್ರವಲ್ಲ, ಡಿಜಿಟಲ್ ಲೈಬ್ರರಿ ಕೂಡ ಇಲ್ಲಿದೆ. ಮಾಜಿ ಮುಖ್ಯಮಂತ್ರಿ, ಸಂಘದ ಸದಸ್ಯರಾಗಿರುವ ಜಗದೀಶ ಶೆಟ್ಟರ್ ಡಿಜಿಟಲ್ ಲೈಬ್ರರಿಗೆ ತಮ್ಮ ಅನುದಾನ ನೀಡಿದ್ದಾರೆ. 10ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್ ಸೇರಿ ಡಿಜಿಟಲ್ ಗ್ರಂಥಾಲಯಕ್ಕೆ ಅಗತ್ಯವಿದ್ದ ಇತರ ಪರಿಕರ ನೀಡಿದ್ದಾರೆ. ಮನುಸೂತ್ರ, ಎಐಆರ್, ಕೆಎಲ್ ಜೆ, ಎಸ್ ಸಿಸಿ, ಲಾ ಸ್ಯೂಟ್ ಪೋರ್ಟಲ್ ಗಳಿಗೆ ವಾರ್ಷಿಕ ಚಂದಾದಾರಿಕೆಯನ್ನು ಸಂಘ ಪಡೆದಿದೆ. 15ಲಕ್ಷ ಅನುದಾನದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದೆ.
ಕೇವಲ ಹುಬ್ಬಳ್ಳಿ ವಕೀಲರ ಸಂಘಕ್ಕೆ ಮಾತ್ರ ಲಾ ರಿಸರ್ಚ್ ಆ್ಯಂಡ್ ಸ್ಟಡಿ ಸೆಂಟರ್ ಸೀಮಿತವಾಗಿಲ್ಲ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸೇರಿ ರಾಜ್ಯದ 106 ಕಾನೂನು ಕಾಲೇಜು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2022 10:13 am