ಧಾರವಾಡ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿನ ಆರೋಪಿಗಳನ್ನು ಘಟನೆ ನಡೆದ ಕೂಡಲೇ ಬಂಧಿಸಬೇಕು. ವಿಳಂಬ ಮಾಡದೇ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತ್ರೈಮಾಸಿಕವಾಗಿ ಪ್ರಗತಿ ಪರಿಶೀಲನೆ ಸಭೆಗಳನ್ನು ನಿಯಮಿತವಾಗಿ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 2022 ನೇ ಸಾಲಿನ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ಸುಮಾರು 132 ದೌರ್ಜನ್ಯ ಪ್ರಕರಣಗಳಲ್ಲಿ ಈವರೆಗೆ 5 ಪ್ರಕರಣಗಳು ವಿಲೇವಾರಿಯಾಗಿವ. ಒಂದು ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 127 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಕಾಯ್ದೆಯ ಕುರಿತು ಜನಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದ ಮಾದರಿಯಲ್ಲಿಯೇ ಎಲ್ಲಾ ಪೊಲೀಸ್ ಠಾಣೆಗಳಲ್ಲಿಯೂ ತ್ರೈಮಾಸಿಕ ಜಾಗೃತಿ ಸಭೆಗಳನ್ನು ನಡೆಸಬೇಕು ಎಂದರು.
ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗಗಳ ಕಲ್ಯಾಣ ಸಂಘ ಅನುದಾನಿತ ಪ್ರೌಢಶಾಲೆಯ ಕಟ್ಟಡ, ಆಟದ ಮೈದಾನ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮದಡಿ ಮಾರ್ಗಸೂಚಿ ಬೆಲೆಯ ಶೇ.50 ರ ದರದಲ್ಲಿ 5 ಎಕರೆ ಜಮೀನು ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದಾಗ ಸಭೆಯಲ್ಲಿ ಹಾಜರಿದ್ದ ಸದಸ್ಯರೆಲ್ಲರೂ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಕುಂದಗೋಳ ತಾಲೂಕಿನಲ್ಲಿ ನಿರ್ಮಲಾ ನಾಗಪ್ಪ ಕಲಿವಾಳ ಅವರ ಪತಿಯು ಮೂರನೇ ದರ್ಜೆ ಗುತ್ತಿಗೆದಾರರು ಹಾಗೂ ಜಿಎಸ್‌ಟಿ ತೆರಿಗೆ ಪಾವತಿದಾರರಾಗಿದ್ದಾರೆ ಅವರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಮಂಜೂರು ಮಾಡಿದ ಭೂಮಿಯನ್ನು ತಕ್ಷಣ ಮರಳಿ ನಿಗಮಕ್ಕೆ ಪಡೆದು ಬೇರೆ ಅರ್ಹ ಫಲಾನುಭವಿಗೆ ಭೂಮಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ಮಾತನಾಡಿ, ಜಿಲ್ಲೆಯಲ್ಲಿ ಎಸ್ ಸಿ ಹಾಗೂ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಲಾಗುತ್ತಿದೆ. ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ಇರುವ ಪ್ರಕರಣಗಳಲ್ಲಿ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ದೌರ್ಜನ್ಯವೆಸಗಿದ ಆರೋಪಿಗಳನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲಾಗುತ್ತಿದೆ ಎಂದರು.
ಸಮಿತಿ ಸದಸ್ಯ ಅಶೋಕ ದೊಡ್ಡಮನಿ ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಂದ ಸುಳ್ಳು ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಎಂದು ಇತ್ತೀಚೆಗೆ ಕೆಲವು ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ,ಮನವಿ ಅರ್ಪಿಸಿರುವುದು ಕೂಡ ದೌರ್ಜನ್ಯದ ಹೊಸ ವಿಧಾನವೇ ಆಗಿದೆ.ಇದು ಕಾಯ್ದೆಗೆ ವಿರುದ್ಧವಾದ ಹಾಗೂ ಸಂವಿಧಾನ ಬಾಹಿರ ನಡೆಯಾಗಿದೆ. ಸಮಾಜದಲ್ಲಿ ಒಡಕು ಉಂಟು ಮಾಡಿ, ಸ್ವಾಸ್ಥ್ಯ ಹದಗೆಡಿಸುವ ಅಂತಹ ಶಕ್ತಿಗಳ ವಿರುದ್ಧವೇ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ತೇಜೋವಧೆ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
Kshetra Samachara
23/02/2022 10:31 pm