ಧಾರವಾಡ: ದಿನಾಂಕ 18-12-2021 ರಂದು ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು. ಲೋಕ ಅದಾಲತ್‍ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಉಮೇಶ್ ಎಂ. ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 12 ಪೀಠಗಳನ್ನು, ಹುಬ್ಬಳ್ಳಿಯಲ್ಲಿ 16 ಪೀಠಗಳನ್ನು, ಕುಂದಗೋಳ, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 02 ಪೀಠಗಳು ಸೇರಿದಂತೆ ಒಟ್ಟು 34 ಪೀಠಗಳನ್ನು ಸ್ಥಾಪಿಸಲಾಗಿತ್ತು.
ವಿವಿಧ ರೀತಿಯ ಸುಮಾರು 18,725 ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 10,264 ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ 142 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಯಿತು. ಸುಮಾರು 31,73,87,640 ಕೋಟಿಗಿಂತ ಹೆಚ್ಚು ಮೊತ್ತವನ್ನು ವಸೂಲು ಮಾಡಲಾಯಿತು.
ಜಿಲ್ಲೆಯ ಕುಂದಗೋಳ ತಾಲೂಕಿನ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಪರಮೇಶ್ವರ ಅವರು ಸುಮಾರ 35 ವರ್ಷಗಳಿಂದ ವಿಲೇ ಇದ್ದ ಗಂಗಾಯಿ ಮತ್ತು ತೆಂಬದಮನಿ ಕುಟುಂಬಗಳ ನಡುವಿನ ಆಸ್ತಿ ವಿವಾವದವನ್ನು ಸುಖಾಂತ್ಯವಾಗಿ ರಾಜೀ ಸಂದಾನದ ಮೂಲಕ ಮುಕ್ತಾಯಗೊಳಿಸಿದರು. ಲೋಕ ಅದಾಲತ್‍ನಲ್ಲಿ ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿಯ ಅಧಿಕಾರಿಗಳು, ವಿಮೆ ಕಂಪೆನಿಯ ಪ್ಯಾನಲ್ ವಕೀಲರುಗಳು, ಎನ್.ಡಬ್ಲು.ಕೆ.ಆರ್.ಟಿ.ಸಿ. ಅಧಿಕಾರಿಗಳು, ಅರ್ಜಿದಾರರ ಪರ ವಕೀಲರುಗಳು, ಕಕ್ಷಿದಾರರು ಭಾಗವಹಿಸಿ ಸದರಿ ರಾಷ್ಟ್ರೀಯ-ಲೋಕ ಅದಾಲತ್‍ನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪುಷ್ಪಲತ ಸಿ.ಎಂ ಅವರು ತಿಳಿಸಿದ್ದಾರೆ.
Kshetra Samachara
18/12/2021 10:33 pm