ಧಾರವಾಡ: ಧಾರವಾಡ ಜಿಲ್ಲೆಯ ಯಾವುದೇ ಸ್ಥಳದಿಂದ ನೆರವು ಬಯಸಿ ಸಾರ್ವಜನಿಕರು ಕರೆ ಮಾಡಿದರೆ ತಕ್ಷಣ ಪೊಲೀಸ್ ಇಲಾಖೆಯು ಅವರ ಸ್ಪಂದನೆಗೆ ಧಾವಿಸಿ ಸಹಾಯ ಮಾಡಲು ಒಂದೇ ಭಾರತ, ಒಂದೇ ತುರ್ತು ಕರೆ ಅಡಿಯಲ್ಲಿ ಉಚಿತ ದೂರವಾಣಿ ಸಂಖ್ಯೆ 112 ಸಹಾಯವಾಣಿಗೆ ಹಾಗೂ ನಿರ್ಭಯ ವಾಹನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಇಂದು ಮಧ್ಯಾಹ್ನ ಎಸ್.ಪಿ.ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಹಿಳೆಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ನಿರ್ಭಯ ಯೋಜನೆಯಡಿ ಧಾರವಾಡ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗೆ ಒಂದರಂತೆ ಒಂಬತ್ತು ನಿರ್ಭಯ ದ್ವಿಚಕ್ರ ವಾಹನಗಳನ್ನು ಸರ್ಕಾರದಿಂದ ನೀಡಲಾಗಿದೆ.
ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದರೆ ಸಮೀಪದಲ್ಲಿರುವ ತುರ್ತು ಸ್ಪಂದನ ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ಅಗತ್ಯ ನೆರವು ನೀಡಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಗಳಲ್ಲಿ ಹಾಗೂ ವಿಶೇಷವಾಗಿ ಮಹಿಳೆಯರ ರಕ್ಷಣೆ ಮತ್ತು ಅವರ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದನೆ ನೀಡಲು ಜಿಲ್ಲಾ ಪೊಲೀಸ್ ಘಟಕದಿಂದ ಪೊಲೀಸ್ ಠಾಣೆಗಳಿಗೆ ನಿರ್ಭಯ ವಾಹನಗಳನ್ನು ಪೂರೈಸಲಾಗಿದೆ ಎಂದು ಅವರು ಹೇಳಿದರು.
ಅಪಘಾತ, ಗಲಭೆ ಸೇರಿದಂತೆ ಯಾವುದೇ ದುರ್ಘಟನೆ ಜರುಗಿದಾಗ 112 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು, ಪ್ರಾಥಮಿಕ ಚಿಕಿತ್ಸೆ, ರಕ್ಷಣೆ ನೀಡಲು ಅನುಕೂಲವಾಗುವ ಆಧುನಿಕ ಸೌಲಭ್ಯ ಹೊಂದಿರುವ ನಾಲ್ಕು ಚಕ್ರದ (ಇನ್ನೋವಾ ಕ್ರಿಸ್ಟಾ) ತುರ್ತು ಸ್ಪಂದನ ವಾಹನಗಳನ್ನು ಸಾರ್ವಜನಿಕ ಸೇವೆಗೆ ಸಿದ್ಧಗೊಳಿಸಲಾಗಿದೆ.
ಸಹಾಯವಾಣಿ ಮೂಲಕ ಇದರಲ್ಲಿ ದಾಖಲಾಗುವ ಕರೆಗಳಿಗೆ ಅನುಗುಣವಾಗಿ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್.ಪಿ. ಕೃಷ್ಣಕಾಂತ ತಿಳಿಸಿದರು.
Kshetra Samachara
02/12/2020 07:30 pm