ಧಾರವಾಡ : ಧಾರವಾಡ ಜಿಲ್ಲೆಯಾದ್ಯಂತ ಇರುವ ಎಲ್ಲಾ ಅಧೀನ ನ್ಯಾಯಾಲಯಗಳಲ್ಲಿ ಡಿಸೆಂಬರ್ 19 ರಂದು ಮೂರನೇ ಶನಿವಾರ ಮೆಘಾ ಲೋಕ ಅದಾಲತ್ ಆಯೋಜಿಸಲಾಗಿದೆ.
ಈ ಲೋಕ ಅದಾಲತ್‍ದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಎಲ್ಲ ಪ್ರಕರಣಗಳನ್ನು ಹಾಗೂ ಮೋಟಾರ್ ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕಾನೂನಿನನ್ವಯ ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳು, ರಾಜಿ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು. ಬ್ಯಾಂಕ್, ಕಾರ್ಮಿಕರು, ನೀರು ಮತ್ತು ವಿದ್ಯುತ್‍ಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ನಗರದಲ್ಲಿ ಸಾಕಷ್ಟು ಬೆಂಚ್‍ಗಳನ್ನು ಹಾಗೂ ನವಲಗುಂದದಲ್ಲಿ, ಕುಂದಗೋಳದಲ್ಲಿ ಮತ್ತು ಕಲಘಟಗಿಯಲ್ಲಿ ತಲಾ 02 ಬೆಂಚ್‍ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಈ ಬೆಂಚ್‍ಗಳಲ್ಲಿ ಒಬ್ಬರು ನ್ಯಾಯಾಧೀಶರು ಹಾಗೂ ಒಬ್ಬರು ವಕೀಲ ಸಂಧಾನಕಾರರು ಭಾಗವಹಿಸುವವರಿದ್ದು, ಅವರ ಮುಖಾಂತರ ರಾಜೀ ಸಂಧಾನ ಮಾಡಿಸಲಾಗುವದು.
ಸಾರ್ವಜನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಮೆಘಾ ಲೋಕ ಅದಾಲತ್ ಪ್ರಯೋಜನ ಪಡೆಯಬಹುದು.
Kshetra Samachara
26/11/2020 09:44 am