ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರಗಳು ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಸ್ಮಾರ್ಟ್ ಸಿಟಿ ಅಂದ್ರೆ ಈ ನಗರಗಳು ಅಷ್ಟೇ ಸ್ಮಾರ್ಟ್ ಆಗಿರಬೇಕಲ್ವೆ? ಧಾರವಾಡ ಅದಕ್ಕೆ ವ್ಯತಿರಿಕ್ತವಾಗಿದೆ. ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ರಸ್ತೆಗಳನ್ನು ನೋಡಿದರೆ ವಾಕರಿಕೆ ಬರುವಂತಾಗಿದೆ. ಅದರಲ್ಲೂ ಪ್ರಮುಖವಾಗಿ ಧಾರವಾಡದ ಹೃದಯ ಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣವನ್ನೊಮ್ಮೆ ನೋಡಿದರೆ ಇಲ್ಲಿನ ಆಡಳಿತ ಕಾರ್ಯ ವೈಖರಿಯನ್ನು ಬಿಚ್ಚಡುತ್ತದೆ.
ಪ್ರತಿನಿತ್ಯ ಸಾವಿರಾರು ಜನ ಈ ಸಿಬಿಟಿಗೆ ಬಂದು ಹೋಗುತ್ತಾರೆ. ಸರ್ಕಾರಿ ಕಚೇರಿಗಳಿಗೆ ಹೋಗುವ ಸಿಬ್ಬಂದಿ ಕೂಡ ಇದೇ ಸಿಬಿಟಿಯಿಂದ ವಿವಿಧ ಇಲಾಖೆಗೆ ಬಸ್ಸುಗಳ ಮೂಲಕ ಹೋಗುತ್ತಾರೆ. ಆದರೆ, ಅವರ ಕಣ್ಣಿಗೂ ಸಿಬಿಟಿಯ ದುಸ್ಥಿತಿ ಕಂಡು ಬಂದಿಲ್ಲ. ನಿಲ್ದಾಣದಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಮಳೆಗೆ ನೀರು ನಿಂತು ಪ್ರಯಾಣಿಕರು ಇದು ಸಿಬಿಟಿಯೋ ಅಥವಾ ಕೆಸರು ಗದ್ದೆಯೋ ಎಂದು ಪ್ರಶ್ನೆ ಮಾಡುವಂತಾಗಿದೆ.
ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಅಧಿಕಾರ ಕೂಡ ನಡೆಸುತ್ತಿದ್ದಾರೆ. ಇಲಾಖೆಯಲ್ಲಿ ಅಧಿಕಾರಿಗಳೂ ಇದ್ದಾರೆ. ಇನ್ನು ಶಾಸಕರೋ ಸಭೆ, ಸಮಾರಂಭಗಳಿಗೆ ಹಾಜರಾಗುತ್ತಿದ್ದಾರೆ. ಆದರೆ, ಹದಗೆಟ್ಟ ರಸ್ತೆಗಳು ಮಾತ್ರ ಸುಧಾರಣೆ ಕಾಣುತ್ತಿಲ್ಲ. ಬಂದ ಅನುದಾನ ಎಲ್ಲಿ ಹೋಗುತ್ತಿದೆ ಎಂಬುದೇ ಪ್ರಶ್ನೆಯಾಗಿದೆ. ಸಿಬಿಟಿ ಬಳಿಯೇ ಇರುವ ಟೆಂಪೊ ಸ್ಟ್ಯಾಂಡ್ ಮುಂದೆ ಕಾಲುವೆಯೇ ಬಿದ್ದಿದ್ದು, ವಾಹನ ಸವಾರರು ಈ ಕಾಲುವೆ ದಾಟಿ ಹೋಗಬೇಕಿದೆ. ಇಂತಹ ರಸ್ತೆಗಳಿಂದ ಜನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
Kshetra Samachara
10/08/2022 03:19 pm