ಧಾರವಾಡ: ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಮೂಲಕ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು 6 ತಿಂಗಳಿನಿಂದ 3 ವರ್ಷದೊಳಗಿನ, 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ ಹಾಗೂ 11 ರಿಂದ 14 ವರ್ಷದ ಶಾಲೆ ಬಿಟ್ಟ ಕಿಶೋರಿಯರಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಪ್ರತಿ ತಿಂಗಳು ವಿತರಿಸಲಾಗುತ್ತಿದೆ. ಪೂರೈಕೆಯಲ್ಲಿ ವ್ಯತ್ಯಾಸ, ಈ ಕುರಿತ ದೂರುಗಳಿದ್ದಲ್ಲಿ ಫಲಾನುಭವಿಗಳು ಅಥವಾ ಸಾರ್ವಜನಿಕರು ನೇರವಾಗಿ ತಮ್ಮ ಕಚೇರಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಅವರು ಇಂದು ಮಧ್ಯಾಹ್ನ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ವಿತರಿಸುವ ಆಹಾರ ಸಾಮಗ್ರಿ ದಾಸ್ತಾನು ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಆಹಾರ ಸಾಮಗ್ರಿಗಳ ಸ್ಯಾಂಪಲ್‍ಗಳನ್ನು ಸ್ವತಃ ತೂಕ ಮಾಡಿ, ಸರಿಯಾದ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳು ಪ್ಯಾಕ್ ಆಗಿರುವ ಕುರಿತು ಖಾತರಿಪಡಿಸಿಕೊಂಡರು.
ಪ್ರತಿ ಅಂಗನವಾಡಿ ಕೇಂದ್ರ ಹಾಗೂ ಇಲಾಖೆ ಕಚೇರಿಗಳ ಸೂಚನಾ ಫಲಕದಲ್ಲಿ ವಿತರಿಸುವ ಆಹಾರ, ಸಾಮಗ್ರಿ ಮಾಹಿತಿ ಪ್ರಕಟಿಸಿ, ಜಿಲ್ಲೆಯ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ವಿವಿಧ ಫಲಾನುಭವಿಗಳಿಗೆ ವಿತರಿಸುವ ಆಹಾರ ಸಾಮಗ್ರಿಗಳ ತೂಕ ಮತ್ತು ಪ್ರಮಾಣದ ಕುರಿತು ಫಲಕಗಳನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳ ಪೊಟ್ಟಣಗಳು ತಲುಪಿದಾಗ ಆಯಾ ಅಂಗನವಾಡಿ ಕೇಂದ್ರಗಳ ಬಾಲವಿಕಾಸ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಸಮ್ಮುಖದಲ್ಲಿ ಅವುಗಳನ್ನು ಎಣಿಕೆ ಮಾಡಿ ಮತ್ತು ತೂಕ ಮಾಡಿ ನಿಗದಿಪಡಿಸಿದ ಅಳತೆಯಲ್ಲಿ ಇರುವ ಕುರಿತು ದೃಢಪಡಿಸಿಕೊಳ್ಳಬೇಕು. ಬಾಲವಿಕಾಸ ಸಮಿತಿ ಹಾಗೂ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರಿಗೆ ಈ ಕುರಿತು ವಿವರವಾದ ಮಾಹಿತಿಯನ್ನು ಕಾಲ ಕಾಲಕ್ಕೆ ನೀಡಬೇಕು ಎಂದರು.
ಸಕಾಲಕ್ಕೆ ಆಹಾರ ಸಾಮಗ್ರಿಗಳ ವಿತರಣೆ ಹಾಗೂ ಅವುಗಳ ಅಳತೆ ಪ್ರಮಾಣದ ಬಗ್ಗೆ ಗಂಭೀರವಾಗಿ ಪರಿಶೀಲಿಸಿ, ಜಿಲ್ಲಾಧಿಕಾರಿಗಳು ಪ್ರತಿಯೊಂದನ್ನು ಸಮಗ್ರವಾಗಿ ಪರಿಶೀಲಿಸಿ ಸರ್ಕಾರದ ಈ ಉತ್ತಮ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ಇಲಾಖೆಯ ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು. ಪ್ರಸ್ತುತ ನಿರ್ವಹಣೆ ತೃಪ್ತಿದಾಯಕವಾಗಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದಲ್ಲಿ ಮತ್ತು ಫಲಾನುಭವಿಗಳಿಗೆ ವಿತರಿಸುವ ಆಹಾರ ಸಾಮಗ್ರಿಗಳ ಕುರಿತು ಸಂಪೂರ್ಣ ತಿಳುವಳಿಕೆಯನ್ನು ನೀಡದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
Kshetra Samachara
09/11/2021 09:44 pm