ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಧಾರವಾಡದ ಯಾಲಕ್ಕಿಶೆಟ್ಟರ್ ಕಾಲೊನಿಯ ಶಂಕರಮಠ ರಸ್ತೆಯ ತುಂಬ ದುರ್ನಾತ ಬರುತ್ತಿದೆ. ಹಲವಾರು ತಿಂಗಳಿಂದ ಈ ವಾಸನೆ ಬರುತ್ತಿದ್ದು, ಅಲ್ಲಿನ ಸ್ಥಳೀಯರು ಪಾಲಿಕೆಯವರಿಗೆ ದೂರು ನೀಡಿದರೂ ಸಹ ಆ ಸಮಸ್ಯೆ ಬಗೆಹರಿದಿಲ್ಲ.
ಏನದು ಸಮಸ್ಯೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ. ಇದು ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯ ಶಂಕರ ಮಠಕ್ಕೆ ಹೋಗುವ ರಸ್ತೆ. ರಸ್ತೆಯ ಅಕ್ಕ ಪಕ್ಕದ ಚರಂಡಿ ಸಂಪೂರ್ಣ ಮುಚ್ಚಿ ಹೋಗಿದೆ. ಹೀಗಾಗಿ ಸಹಜವಾಗಿಯೇ ತ್ಯಾಜ್ಯ ನೀರು ಹರಿದು ಹೋಗದೇ ನಿಂತಲ್ಲೇ ನಿಂತು ದುರ್ನಾತ ಬೀರುತ್ತಿದೆ. ಇದರಿಂದ ಅಲ್ಲಿನ ಸ್ಥಳೀಯರು ದುರ್ನಾತದ ಜೊತೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
ಬಿಲ್ಡಿಂಗ್ ಒಂದನ್ನು ನಿರ್ಮಿಸುವಾಗ ಅದರ ಮಾಲೀಕರು ಚರಂಡಿ ಎತ್ತರಕ್ಕೆ ನಿರ್ಮಿಸಿದಿದ್ದರಿಂದ ಮುಂದೆ ಹರಿದು ಹೋಗಬೇಕಾದ ಚರಂಡಿ ನೀರು ನಿಂತಲ್ಲೇ ನಿಂತು ದುರ್ನಾತ ಬೀರುವಂತಾಗಿದೆ. ಚರಂಡಿ ಮುಚ್ಚಿ ನೀರು ನಿಂತಿದೆ ಎಂದು ಪಾಲಿಕೆಯವರಿಗೆ ಅಲ್ಲಿನ ಸ್ಥಳೀಯರು ದೂರು ಕೊಟ್ಟರೂ ಸಹ ಪಾಲಿಕೆಯವರು ಮಾತ್ರ ಇತ್ತಕಡೆ ಗಮನಹರಿಸಿಲ್ಲ.
ಈ ಚರಂಡಿಗಳು ಈ ರೀತಿ ಬ್ಲಾಕ್ ಆಗಿದ್ದರಿಂದ ಕಾಯಿಪಲ್ಲೆ ತೆಗೆದುಕೊಂಡು ಹೋಗಲು ಬರುವ ವ್ಯಾಪಾರಸ್ಥರು ನಮ್ಮ ಅಂಗಡಿಗೆ ಬರುತ್ತಿಲ್ಲ. ಚರಂಡಿಯನ್ನು ದುರಸ್ತಿಗೊಳಿಸಿ ನೀರು ಹರಿದು ಹೋಗುವಂತೆ ಮಾಡಬೇಕು ಎಂದು ಪಾಲಿಕೆಯ ನೂತನ ಸದಸ್ಯರಿಗೂ ಮನವಿ ಮಾಡಿದ್ದೇವೆ. ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಕಾಯಿಪಲ್ಲೆ ವ್ಯಾಪಾರಸ್ಥೆ ಯಲ್ಲವ್ವ ಉಳ್ಳಿಗೇರಿ ಆಗ್ರಹಿಸಿದರು.
ಹಲವಾರು ತಿಂಗಳಿನಿಂದ ಈ ರೀತಿಯ ಸಮಸ್ಯೆಯನ್ನು ಅಲ್ಲಿನ ನಿವಾಸಿಗಳು ಅನುಭವಿಸುತ್ತಿದ್ದರೂ ಪಾಲಿಕೆಯವರು ಮಾತ್ರ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಇನ್ನಾದರೂ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಅದನ್ನು ಬಗೆಹರಿಸಬೇಕಾಗಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
19/10/2021 03:15 pm