ಹುಬ್ಬಳ್ಳಿ: ಅದು ಧಾರವಾಡ ಜಿಲ್ಲೆಯ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಪಡೆಯಬೇಕು ಅಂದರೆ ಹೋರಾಟವನ್ನೇ ಮಾಡಬೇಕಿದೆ. ನೀರು ಬೇಕು ಅಂದರೆ ಕೆಲಸ ಕಾರ್ಯವನ್ನೆಲ್ಲ ಬಿಟ್ಟು ಕುಟುಂಬಕ್ಕೆ ಕುಟುಂಬವೇ ಹರಸಾಹಸ ಪಡಬೇಕಿದೆ. ಅಷ್ಟಕ್ಕೂ ನೀರಿಗಾಗಿ ಜನರು ಮಾಡುತ್ತಿರೋದಾದ್ರು ಏನು ಅಂತೀರಾ ಈ ಸ್ಟೋರಿ ನೋಡಿ..
ಗಂಗೇ ಬಾರೇ..ತುಂಗೇ ಬಾರೇ ಬಾರೇ ನೀರೆ ಎಂದು ಎಷ್ಟು ಕರೆದರೂ ನೀರು ಮಾತ್ರ ಸಿಗ್ತಿಲ್ಲ.ಬೇಸಿಗೆ ಆರಂಭ ಮುನ್ನವೇ ಕುಡಿಯುವ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದ್ದು,ಕುಡಿಯಲು ನೀರಿಲ್ಲದೇ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹೌದು...ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮಸ್ಥರು ನೀರಿಗಾಗಿ ಮೈಲುಗಟ್ಟಲೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.ಇನ್ನೂ ಮೈಲುಗಟ್ಟಲೇ ಹೋದರು ಕೂಡ ನೀರು ಸಿಗುತ್ತಿಲ್ಲ. ಬಿಂದಿಗೆ ಹಿಡಿದು ದಿನಗಟ್ಟಲೇ ಕಾಯಲೇಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರಿಗೆ ಕುಡಿಯಲು ನೀರಿಲ್ಲ, ಇನ್ನೂ ದನಕರುಗಳಿಗೆ ನೀರು ದೂರದ ಮಾತು ಎಂಬುವಂತಾಗಿದೆ.ಇನ್ನೂ ಬೇಸಿಗೆ ಪ್ರಾರಂಭದ ದಿನಗಳಲ್ಲಿಯೇ ಈ ರೀತಿ ಆದರೆ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುವುದೇ ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ.
ಅಲ್ಲಾಪೂರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.ಕಂಡು ಕಾಣದಂತೆ ಕುಳಿತ ಜನಪ್ರತಿನಿಧಿಗಳು ಮಾತ್ರ ಜನರ ಗೋಳನ್ನು ಕಿವಿ ಮೇಲೆ ಕೂಡ ಹಾಕಿಕೊಳ್ಳುತ್ತಿಲ್ಲ.ಇದ್ದ ಕೆಲಸವನ್ನೆಲ್ಲ ಬಿಟ್ಟು ಬಂದು ನೀರಿಗಾಗಿ ಹೋರಾಟ ಮಾಡಬೇಕಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ನೀರಿಗಾಗಿ ಮೈಲಿಗಟ್ಟಲೇ ನಡೆದು ಸರದಿ ಸಾಲಿನಲ್ಲಿ ನಿಂತಕೊಂಡರು ಕೂಡ ನೀರು ಮಾತ್ರ ಸಿಗುತ್ತಿಲ್ಲ.ಇಷ್ಟೆಲ್ಲಾ ಸಮಸ್ಯೆ ತಲೆದೂರಿದ್ದರೂ ಕೂಡ ಜನರ ಅಳಲು ಕೇಳುವವರು ಯಾರು ಇಲ್ಲದಂತಾಗಿದೆ.ಇನ್ನೂ ಮಲಪ್ರಭಾ ಕಾಲುವೆ ಇದ್ದರು, ಗ್ರಾಮಸ್ಥರಿಗೆ ಮಾತ್ರ ನೀರು ಸಿಗ್ತಿಲ್ಲ ಎಂದರೇ ಇದು ದುರಂತವೇ ಸರಿ.
ಗ್ರಾಮಸ್ಥರು ಅನಿವಾರ್ಯತೆಯಿಂದ ಊರಿನ ಹೊರಗಡೆ ಇರುವ ಕೆರೆಯ ನೀರನ್ನೇ ಕುಡಿದು ಜೀವನ ಸಾಗಿಸಬೇಕಾಗಿದೆ. ಕೆರೆಯ ನೀರು ಕಲುಷಿತವಾಗಿದೆ.ಈ ನೀರು ಕುಡಿದು ಏನಾದ್ರೂ ಆದ್ರೆ ಯಾರು ಹೊಣೆ.ಇನ್ನಾದರೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಮಂಡಳಿ ಎಚ್ಚೇತ್ತುಕೊಂಡು ಅಲ್ಲಾಪೂರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ...
Kshetra Samachara
27/02/2021 01:36 pm