ಧಾರವಾಡ: ಇಲ್ನೋಡ್ರಿ ಈಗೇನ ನೀವು ನೋಡಾಕತ್ತೀರಲ್ಲ ಇದು ಧಾರವಾಡದಿಂದ ಉಪ್ಪಿನ ಬೆಟಗೇರಿಗೆ ಹೋಗು ರಸ್ತೆ. ಇದನ್ನ ರಾಜ್ಯ ಹೆದ್ದಾರಿ ಅಂತಾನೂ ಕರೀತಾರ. ಈ ರಸ್ತೆದಾಗ ಮೊಣಕಾಲುದ್ದ ಗುಂಡಿ ಬಿದ್ದಿದ್ದು. ಅವನ್ನ ಮುಚ್ಚಾಕ ಅಂತ 5 ಲಕ್ಷ ರೂಪಾಯಿ ಮಂಜೂರಾಗಿತ್ತಂತ. ಗುಂಡಿ ಏನೋ ಮುಚ್ಚಾರ ಆದ್ರ ಅದು ಹೆಂಗ ಆಗೇತಿ ಪಾ ಅಂದ್ರ ಹುಲ್ಲಾಗಿನ ನಾಯಿ ಅದೇನೋ ತಿಂದಂಗ ಅಂತಾರಲ್ಲ ಹಂಗ ಆಗೇತಿ ನೋಡ್ರಿ.
ಈ ಗುಂಡಿ ಮುಚ್ಚೋ ಕೆಲಸ ಒಬ್ಬ ಗುತ್ತಿಗೆದಾರ ತುಗೊಂಡಿದ್ನಂತ. ಆದ್ರ ಆ ಗುತ್ತಿಗೆದಾರನ ಕಡೆಯಿಂದ ಮತ್ತೊಬ್ಬ ಗುತ್ತಿಗೆದಾರ ಸಬ್ ಕಾಂಟ್ರ್ಯಾಕ್ಟ್ ಪಡಕೊಂಡು ಕೆಲಸ ಮಾಡ್ಯಾನ. ಯಾದವಾಡದಿಂದ ಉಪ್ಪಿನ ಬೆಟಗೇರಿ ಕಡೆ ಹೋಗು ರಸ್ತೆ ಒಂದು ಭಾಗ ಸಂಪೂರ್ಣ ಕೆತ್ತಿ ಹೋಗೇತಿ. ಇದರಿಂದ ಎದರ ಬದರ ಬರು ಗಾಡಿಗೋಳು ಒಂದೇ ಕಡೆ ಬರತಾವ. ಬಾಳ ಸಲಾ ಆ್ಯಕ್ಸಿಡೆಂಟ್ ಕೂಡ ಆಗ್ಯಾವ್ರಿ. ಪಾಪ ನಮ್ಮ ಕಾಂಟ್ರ್ಯಾಕ್ಟರ್ ಗೆ ಅದು ಕಂಡಿಲ್ಲೋ ಏನೋ?
ಇದರ ಸಂಬಂಧ ಕಾಂಟ್ರ್ಯಾಕ್ಟರ್ ನ ಕೇಳಿದ್ರ ಆ ಕೆಲಸಾ ನಮಗ ಬರೋದಿಲ್ರಿ. ಬರೇ ದೊಡ್ಡು ದೊಡ್ಡು ಗುಂಡಿ ಮುಚ್ಚಾಕ ಮಾತ್ರ ನಮಗ ಹೇಳ್ಯಾರ. ಆ ಕೆಲಸಾ ಅಷ್ಟ ಮಾಡೇವ್ರಿ ಅಂತಾರ. ಇನ್ನ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನ ಕೇಳಿದ್ರ ಆ ಒಂದು ಲೇಯರ್ ಕಿತ್ತು ಹೋಗಿದ್ದನ್ನ ನಾನೂ ನೋಡೇನ್ರಿ. ಆದ್ರ ಆ ಕೆಲಸಾ ಈಗ ಮಾಡಾಕ ಬರೋದಿಲ್ಲ. ಮುಂದಿನ ಹಂತದಾಗ ಹಣ ಬಿಡುಗಡೆ ಆದ್ರ ಮಾಡ್ತೇವಿ. ಈಗ ಗುಂಡಿ ಮುಚ್ಚಾಕ ಮಾತ್ರ ರೊಕ್ಕ ಬಂದೈತಿ ಅಂತಾರ.
ಅಲ್ರೀ ಅದಕ್ಕ ರೊಕ್ಕ ಬಂದಿಲ್ಲ ಇದಕ್ಕ ರೊಕ್ಕ ಬಂದಿಲ್ಲ ಅಂತಂದ್ರ ಮುಂದ ಆ ಕೆಲಸಾ ಮಾಡೋದಾದ್ರೂ ಯಾವಾಗ. ಗುಂಡಿ ಮುಚ್ಚೋ ಕೈಲೆ ಆ ಕಿತ್ತೋದ ಒಂದ ಲೇಯರ್ ಮ್ಯಾಲೆ ಡಾಂಬರ್ ಒಗದು ಸಾಪ್ ಮಾಡಿದ್ರ ಮುಗದ ಹೊಕ್ಕಿತ್ರಿ ಪಾ. ಈ ರಸ್ತೆಗೆ ಬಂದಿರೋ ಅನುದಾನಾನಾದ್ರು ಎಷ್ಟು ಅದರಾಗ ಖರ್ಚು ಮಾಡಿದ ಹಣ ಎಷ್ಟು ಅನ್ನೋದನ್ನ ಲೋಕೋಪಯೋಗಿ ಇಲಾಖೆಯವರು ತಿಳಿಸಬೇಕಾಗೈತಿ ನೋಡ್ರಿ ಪಾ.
Kshetra Samachara
03/02/2021 07:05 pm