ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಶಿಕ್ಷಣ ಸಚಿವರು ನಿದ್ದೆ ಮಾಡ್ತಿದ್ದಾರಾ? ಇದು ಸರ್ಕಾರಿ ಶಾಲೆಯೋ, ದನದ ಹಟ್ಟಿಯೋ? ಹುಬ್ಬಳ್ಳಿಯ ಶಿರಡಿ ನಗರದ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ಅವ್ಯವಸ್ಥೆಯಿಂದ ಕೂಡಿದ್ರೂ ಶಿಕ್ಷಣ ಅಧಿಕಾರಿಗಳಿಗೆ ಕಾಣುತ್ತಿಲ್ಲ!
ಹೌದು... ಇದು ನಮ್ಮ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಎಷ್ಟು ಅಗೌರವ ತೋರಿಸ್ತಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ. ಹುಬ್ಬಳ್ಳಿಯ ಶಿರಡಿ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿ ಹೇಳತೀರದಾಗಿದೆ. ಇದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆ. ಈ ಶಾಲೆ ದುಸ್ಥಿತಿ ನೋಡಿದಾಗ ನಮ್ಮ ಶಿಕ್ಷಣ ಇಲಾಖೆ ಸತ್ತೇ ಹೋಗಿದೆಯಾ ಅನ್ನುವಷ್ಟು ಆಕ್ರೋಶ ಮೂಡುತ್ತೆ.
ಈ ಶಾಲೆಯ ಕಾಂಪೌಂಡ್ ಗೋಡೆ ಕುಸಿದಿದ್ರೆ, ಚರಂಡಿ ನೀರು ಶಾಲೆಯ ಮುಂಭಾಗಕ್ಕೆ ಬಂದು ನಿಲ್ಲುತ್ತದೆ. ಅಲ್ಲದೆ, ಗೋಡೆ ಬಿರುಕು ಬಿದ್ದಿದ್ದು ಕುಸಿಯುವುದರಲ್ಲಿದೆ. ಛಾವಣಿ ಒಡೆದು ಹೋಗಿದೆ. ಮಳೆ ಬಂದ್ರೆ ನೀರೆಲ್ಲ ತರಗತಿಯೊಳಗೆ ನುಗ್ಗುತ್ತೆ.
ಇನ್ನು ಮಕ್ಕಳಿಗೆ ಸೂಕ್ತ ಮೈದಾನವಿಲ್ಲ. ರಾತ್ರಿಯಾದ್ರೆ ಕುಡುಕರ ಹಾವಳಿ, ಅನೈತಿಕ ಚಟುವಟಿಕೆ ತಾಣವಾಗಿದೆ. ಹಲವು ವರ್ಷಗಳಿಂದ ಶಾಲೆಗೆ ಬಣ್ಣ ಹಚ್ಚಿಲ್ಲ. ಈ ಕುರಿತು ಪಾಲಕರೇ ಶಾಲೆಗೆ ಬಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿರಡಿ ನಗರದ ಸುತ್ತಮುತ್ತಲಿನ ಬಡ- ಮಧ್ಯಮ ವರ್ಗದ ಜನರು ಈ ಶಾಲೆಯನ್ನೇ ನೆಚ್ಚಿಕೊಂಡಿದ್ದಾರೆ. ಅದ್ರಲ್ಲೂ ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೊಳಗಾದ ಹೆಚ್ಚಿನ ಹೆತ್ತವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಬಯಸುತ್ತಿದ್ದಾರೆ. ಆದ್ರೆ, ಈ ಶಾಲೆ ದುಸ್ಥಿತಿಯಿಂದ ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮತ್ತೆ ಮುಖ ಮಾಡುವಂತಾಗಿದೆ ಎನ್ನುತ್ತಾ ಪಾಲಕರು ಅಧಿಕಾರಿಗಳು, ಜನಪ್ರತಿನಿಧಿಗಳ ಮೇಲೆ ಗರಂ ಆಗಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಕ್ಷೇತ್ರದ ಶಾಲೆ ಇಂತಹ ಸ್ಥಿತಿಯಲ್ಲಿದ್ರೂ ಅವರಿಗೆ ಈ ಬಗ್ಗೆ ತಿಳಿದಿಲ್ವ? ಈಗಲಾದ್ರೂ ಅಧಿಕಾರಿಗಳು, ಶಾಸಕರು ಶಿಕ್ಷಣ ಸಚಿವರ ಗಮನಕ್ಕೆ ತಂದು, ಶಿರಡಿ ನಗರದ ಮಂದಿಗೆ ಸುಸಜ್ಜಿತ ಸರ್ಕಾರಿ ಶಾಲೆ ನಿರ್ಮಿಸಿ ಕೊಡಿ ಅನ್ನೋದು ಪಬ್ಲಿಕ್ ನೆಕ್ಸ್ಟ್ ಆಗ್ರಹ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/08/2022 06:09 pm