ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಂಗಡಿಯೊಂದಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಅಂಗಡಿಯ ಬಾಗಿಲನ್ನು ಒಡೆದು ಅಲ್ಲಿನ ಗ್ಲಾಸ್ ಗಳನ್ನು ಪುಡಿ ಪುಡಿ ಮಾಡಿ ಅಲ್ಲಿದ್ದ ಸಾಮಗ್ರಿಗಳನ್ನು ದೋಚಿಕೊಂಡು ಹೋದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಶಹರ ಠಾಣೆಯ ಪೊಲೀಸರು 6 ಜನ ಆರೋಪಿಗಳನ್ನು ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 29 ರಂದು ಚಂದ್ರಕಲಾ ಟಾಕೀಸ್ ಬಳಿಯಲ್ಲಿರುವ ಇಮ್ರಾನ್ ಖಾನ್ ಪಠಾಣ್ ಎಂಬುವರಿಗೆ ಸೇರಿದ ಅಂಗಡಿಯೊಂದಕ್ಕೆ ನುಗ್ಗಿದ 6 ಜನ ದುಷ್ಕರ್ಮಿಗಳ ತಂಡ ಏಕಾಏಕಿ ಅಂಗಡಿಯ ಬಾಗಿಲು ಮುರಿದು ದಾಳಿ ನಡೆಸಿ ಪರಾರಿಯಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ಪ್ರಕರಣ ದಾಖಲು ಮಾಡುವಂತೆ ಶಹರ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದ್ದರು.
ಶಹರ ಠಾಣೆಯ ಪೊಲೀಸರು ಡಕಾಯಿತಿ ಪ್ರಕರಣ ದಾಖಲು ಮಾಡಿಕೊಂಡು ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ 6 ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳಾದ ಶಿವಾಜಿ,ಮಹ್ಮದ,ಆಯುಬ್, ಅಬ್ಬು,ಮುಬಾರಕ್,ಖಾಜಾ ಎಂಬುವವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಸದ್ಯ ಈ 6 ಜನ ಆರೋಪಿಗಳಿಂದ ಕೆಲವೊಂದಿಷ್ಟು ಪ್ರಮುಖ ಮಾಹಿತಿಗಳನ್ನು ಪೊಲೀಸರು ಇದೀಗ ಕಲೆ ಹಾಕಿದ್ದು, ಈ ಘಟನೆಯ ಹಿಂದೆ ಯಾರಾದ್ರೂ ಇದ್ದಾರಾ ಎಂಬ ಹಲವು ಆಯಾಮಗಳಿಂದ ಕೂಡ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಕೂಡಾ ತಿಳಿದು ಬಂದಿದೆ.
ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್
Kshetra Samachara
12/12/2024 05:51 pm