ಇದು ಐದಾರು ಊರಿಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ರೋಡ್. ಇಲ್ಲಿ ಸ್ವಲ್ಪ ಯಾಮಾರಿದರೂ ಅಪಘಾತ ಖಚಿತ. ಈ ರಸ್ತೆಯಲ್ಲಿ ಸಂಚರಿಸುವಾಗ ಅದೆಷ್ಟೋ ಜನರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದರೆ, ಇನ್ನು ಕೆಲವರು ಸ್ಮಶಾನ ಸೇರಿದ್ದಾರೆ. ಹಾಗಿದ್ದರೇ ಯಾವುದು ಆ ಸಾವಿನ ದಾರಿ ಅಂತೀರಾ? ಇಲ್ಲಿದೆ ನೋಡಿ... ಕಂಪ್ಲೀಟ್ ಡೀಟೆಲ್ಸ್.
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯೇ ಈ ಸಾವಿನ ರಹದಾರಿ. ಹೌದು.. ಈ ರಸ್ತೆಯನ್ನು ನೋಡಿದರೇ ನಿಜಕ್ಕೂ ಭಯ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ, ಹುಬ್ಬಳ್ಳಿ-ಧಾರವಾಡ ಬೈಪಾಸ್ ಬಿಟ್ಟರೆ ಇದುವೇ ಸಾವಿನ ರಹದಾರಿ ಎಂಬ ಅಪಕೀರ್ತಿಗೆ ಪಾತ್ರವಾಗಿದೆ.
ಇಲ್ಲಿ 2019ರಲ್ಲಿ 2 ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇಬ್ಬರೂ ತೀವ್ರ ಗಾಯಗೊಂಡಿದ್ದಾರೆ. 2020ರಲ್ಲಿ ಒಬ್ಬರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. 2021ರಲ್ಲಿ 4 ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮೂವರು ಆಸ್ಪತ್ರೆಗೆ ದಾಖಲಾಗಿದ್ದರು. 2022ರಲ್ಲಿ 7 ಅಪಘಾತ ಸಂಭವಿಸಿದ್ದು, 7 ಜನ ಮೃತ ಪಟ್ಟಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸಾವಿನ ಹೆದ್ದಾರಿಯಲ್ಲಿ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಅಪಘಾತಕ್ಕೆ ಒಳಗಾದ ವಾಹನಗಳೂ ದೊಡ್ಡ ಪ್ರಮಾಣದಲ್ಲಿ ಜಖಂಗೊಂಡಿದ್ದು, ಗ್ಯಾರೇಜ್ ಸೇರದೆಯೇ ಗುಜರಿ ಸೇರಿವೆ. ಇಂತಹ ರಸ್ತೆಯಲ್ಲಿ ನೂಲ್ವಿ, ಅದರಗುಂಚಿ, ಬೆಳಗಲಿ, ಶೇರೆವಾಡ, ಕುಂದಗೋಳ ಜನ ಓಡಾಡುತ್ತಿದ್ದು, ಕೂಡಲೇ ಫ್ಲೈಓವರ್ ನಿರ್ಮಿಸಿ ಅಪಘಾತಕ್ಕೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಅದೆಷ್ಟೋ ಜೀವಗಳನ್ನು ಬಲಿ ಪಡೆದಿದ್ದರೂ ಸರ್ಕಾರಕ್ಕೆ ರಸ್ತೆಯ ಭೀಕರತೆ ಇನ್ನೂ ಅರ್ಥವಾಗಿಲ್ಲ. ಜನರ ಗೋಳೂ ಕೇಳಿಸದಿರುವುದು ನಿಜಕ್ಕೂ ವಿಪರ್ಯಾಸ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/06/2022 07:15 pm