ಪಬ್ಲಿಕ್ ನೆಕ್ಸ್ಟ್ ವಿಶೇಷ
ಕುಂದಗೋಳ : ಕುಂದಗೋಳ ತಾಲೂಕಿನಲ್ಲಿ ಒಣ ಬೇಸಾಯದ ಕೃಷಿಯೇ ಹೆಚ್ಚು, ಮಳೆ ಆಶ್ರಿತ ಬೆಳೆ ಬೆಳೆಯುವ ರೈತಾಪಿ ವರ್ಗದ ಪಾಲಿಗೆ ಪ್ರಸಕ್ತ ವರ್ಷ ಮಳೆ ದೂರವಾಗಿ ರೈತರಲ್ಲಿ ಆತಂಕ ತಲೆದೋರಿದೆ.
ಹೌದು ! ಎಡೆಕುಂಟೆ ಹೊಡೆಯುವ ಹಿಡಿತಕ್ಕೆ ಬೆಳೆದ ಹೆಸರು, ಶೇಂಗಾ, ಹತ್ತಿ ಬೆಳೆಗಳಿಗೆ ಮಳೆ ಅಭಾವ ಮತ್ತು ರೋಗದ ಭೀತಿ ಎದುರಾಗಿದೆ. ಇದ್ರಿಂದ ಎಲ್ಲಿ ಬೆಳೆ ಒಣಗುತ್ತದೋ ಎಂಬ ಭಯದಲ್ಲಿ ರೈತ ಅಲ್ಲೊಂದು ಇಲ್ಲೊಂದು ಕೃಷಿಹೊಂಡದಲ್ಲಿ ಸಂಗ್ರಹವಾದ ನೀರಿನ ಬಳಕೆಗೆ ಸಿದ್ಧವಾಗಿದ್ದಾರೆ. ಈಗಾಗಲೇ ಕೃಷಿಹೊಂಡದ ನೀರನ್ನು ಬಾಡಿಗೆ ಯಂತ್ರದ ಸಹಾಯದಿಂದ ಸ್ಪಿಂಕ್ಲರ್ ಪೈಪ್ ಮೂಲಕ ಬೆಳೆಗಳಿಗೆ ಸಿಂಪಡಿಸುವಲ್ಲಿ ನಿರತರಾಗಿದ್ದಾರೆ.
ಸಂಪೂರ್ಣ ಮಳೆ ಆಶ್ರಿತ ಭೂಮಿಯನ್ನು ಹೊಂದಿ ಕೆಲ ಪ್ರದೇಶವಷ್ಟೇ ನೀರಾವರಿಗೆ ಸೀಮಿತವಾದ ಕುಂದಗೋಳ ತಾಲೂಕಿನ ರೈತರಲ್ಲಿ ಮಳೆ ಅಭಾವ ಭಯ ತಂದಿದ್ದು ಬೆಳೆಗಳಿಗೆ ಪರಿಹಾರ ಅಂಗಲಾಚುತ್ತಿದ್ದಾರೆ. ಒಟ್ಟಾರೆ ಆರಿದ್ರ ಮಳೆ ಅಭಾವ ರೈತಾಪಿ ಜಗತ್ತನ್ನು ತಲ್ಲಣಗೊಳಿಸಿದ್ದು ಪುನರ್ವಸು ಮಳೆ ಸುರಿದು ಅನ್ನದಾತನ ಬೆಳೆ, ಬದುಕು ಎರಡನ್ನೂ ಉಳಿಸಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
28/06/2022 12:57 pm