ಧಾರವಾಡ: ಮುಂಗಾರು ಬಿತ್ತನೆ ಪೂರ್ಣಗೊಂಡಿದೆ. ಸದ್ಯ ರೈತ ಸಮುದಾಯ ಮಳೆಗಾಗಿ ದಾರಿ ಕಾಯುತ್ತಿದೆ. ಬಿತ್ತನೆಯಾಗಿ 15 ದಿನಗಳ ಕಳೆದರೂ ಹಲವೆಡೆ ಇನ್ನೂ ಮಳೆಯಾಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಮಳೆಗಾಗಿ ಗ್ರಾಮಸ್ಥರು ಗುರ್ಜಿ ಪೂಜೆಯ ಮೊರೆ ಹೋಗಿದ್ದಾರೆ.
ಹೀಗೆ ತಲೆ ಮೇಲೆ ಗುರ್ಜಿ ಹೊತ್ತು ಸಾಗುತ್ತಿರುವ ಮಕ್ಕಳು, ಅದರ ಪೂಜೆ ಮಾಡುವ ಮೂಲಕ ಮಳೆ ಬರಲೆಂದು ಪ್ರಾರ್ಥಿಸುತ್ತಿದ್ದಾರೆ. ಈ ದೃಶ್ಯ ಕಂಡು ಬಂದದ್ದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಸಮೀಪ ಇರುವ ಹನುಮನಹಾಳ ಗ್ರಾಮದಲ್ಲಿ.
ಬಿತ್ತನೆಯಾಗಿ ಅನೇಕ ದಿನಗಳು ಕಳೆದಿದ್ದರೂ ಮಳೆಯಾಗದೇ ಇರುವುದರಿಂದ ಅಲ್ಲಲ್ಲಿ ಈ ರೀತಿ ಗುರ್ಜಿ ಪೂಜೆ ಮಾಡಲಾಗುತ್ತಿದೆ. ಇದಕ್ಕೆ ಹನುಮನಹಾಳ ಗ್ರಾಮ ಕೂಡ ಹೊರತಾಗಿಲ್ಲ. ತುಂಬಿದ ಕೊಡ ಅಥವಾ ತಂಬಿಗೆಯನ್ನಿಟ್ಟು ಅದರಲ್ಲಿ ಬೇವಿನ ಸೊಪ್ಪನ್ನು ಹಾಕಿ ಪೂಜಿಸಲಾಗುತ್ತದೆ. ರೈತರ ಮನೆಯ ಮಕ್ಕಳು ಅಂದು ನೀರಿನಲ್ಲಿ ನೆನೆದುಕೊಂಡು ಗುಡಿ ಗುಂಡಾರಗಳಿಗೆ, ಬೇವು ಹಾಗೂ ಬನ್ನಿ ಕಟ್ಟೆಗಳಿಗೆ ನೀರು ಹಾಕಿ ಬೇಗನೆ ಮಳೆ ಬರಲೆಂದು ಬೇಡಿಕೊಳ್ಳುತ್ತಾರೆ. ಕೆಲವರು ಸಂಜೆ ದೇವಸ್ಥಾನಕ್ಕೆ ತೆರಳಿ ದೀಪ ಹಚ್ಚಿ ಬರುತ್ತಾರೆ. ಕೆಲವು ಮಕ್ಕಳು ತಲೆಯ ಮೇಲೆ ಗುರ್ಜಿಯನ್ನು ಹೊತ್ತು ಮನೆ ಮನೆಗಳಿಗೆ ತೆರಳಿ ನೀರು ಹಾಕಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಮಳೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ.
Kshetra Samachara
20/06/2022 08:01 pm