ಧಾರವಾಡ: ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆ ಶನಿವಾರ ಅಕ್ಷರಶಃ ಗದ್ದಲದಿಂದ ಕೂಡಿತ್ತು. ಒಂದೆಡೆ ರೈತರು ಹೆದ್ದಾರಿ ತಡೆ ನಡೆಸಿದ್ದರಿಂದ ಸಂಚಾರ ದಟ್ಟನೆ ಉಂಟಾಗಿತ್ತು. ಇನ್ನೊಂದೆಡೆ ಬೈಪಾಸ್ ರಸ್ತೆ ಅಗಲೀಕರಣಕ್ಕಾಗಿ ಆಗ್ರಹಿಸಿ ರಸ್ತೆಯಲ್ಲೇ ಶ್ರದ್ಧಾಂಜಲಿ ಸಭೆ ನಡೆದಿದ್ದರಿಂದ ಮತ್ತೊಂದು ಹಂತದಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು.
ಜ.15 ರಂದು ಬೈಪಾಸ್ ನ ಇಟಿಗಟ್ಟಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ, ಅಪಘಾತದಲ್ಲಿ ಮೃತಪಟ್ಟ ಮಹಿಳೆಯರಿಗೆ ಅವರ ಕುಟುಂಬಸ್ಥರೇ ಧಾರವಾಡಕ್ಕೆ ಬಂದು ಶ್ರದ್ಧಾಂಜಲಿ ಸಲ್ಲಿಸಿದರು.
ನಡು ರಸ್ತೆಯಲ್ಲೇ ಪಕ್ಷಾತೀತವಾಗಿ ನಡೆದ ಈ ಶ್ರದ್ಧಾಂಜಲಿ ಸಭೆಯ ನೇತೃತ್ವವನ್ನು ಪಿ.ಎಚ್.ನೀರಲಕೇರಿ, ಶ್ರೀಶೈಲಗೌಡ ಕಮತರ, ಡಾ.ರವಿಕುಮಾರ, ಜೆ.ಎಂ.ರಾಜಶೇಖರ, ಚಂದ್ರಶೇಖರ, ನಿಂಗಪ್ಪ ಕುಡವಕ್ಕಲಿಗೇರ ಸೇರಿದಂತೆ ಇತರರು ವಹಿಸಿದ್ದರು.
ಬೈಪಾಸ್ ರಸ್ತೆ ಅಗಲೀಕರಣ ಆಗಲೇಬೇಕು ಎಂದು ದಾವಣಗೆರೆಯಿಂದ ಬಂದ ಮೃತರ ಸಂಬಂಧಿಗಳು, ನಡು ರಸ್ತೆಯಲ್ಲೇ ಮೃತರಾದ ಎಲ್ಲರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿದರು. ಆ ಮೂಲಕ ರಸ್ತೆ ಅಗಲೀಕರಣ ಆಗಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇನ್ನು ಈ ಶ್ರದ್ಧಾಂಜಲಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪಿ.ಎಚ್.ನೀರಲಕೇರಿ, ಮಾರ್ಚ.18 ರವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಅಷ್ಟರೊಳಗಾಗಿ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದರು.
ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಇಟಿಗಟ್ಟಿ ಕ್ರಾಸ್ ವರೆಗೆ ನೀರಲಕೇರಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ನಂತರ ಇಟಿಗಟ್ಟಿ ಕ್ರಾಸ್ ಬಳಿ ಜಮಾವಣೆಗೊಂಡ ಎಲ್ಲ ಜನ ಒಂದು ಗಂಟೆಗೂ ಹೆಚ್ಚು ಕಾಲ ನಡು ರಸ್ತೆಯಲ್ಲೇ ಶ್ರದ್ಧಾಂಜಲಿ ನಡೆಸಿದ್ದರಿಂದ ವಾಹನಗಳ ದಟ್ಟನೆ ಉಂಟಾಗಿತ್ತು.
Kshetra Samachara
06/02/2021 08:19 pm