ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಹೆಣ್ಣು ಹುಟ್ಟಿದರೆ ಹುಣ್ಣು ಎಂಬ ಭಾವ ಇನ್ನೂ ಮರೆಯಾಗಿಲ್ಲ. ಹೆಣ್ಣು ಮಗು ಹುಟ್ಟಿತೆಂದರೆ ಅದನ್ನು ಕಸದ ತೊಟ್ಟಿಗೋ, ಅನಾಥಾಶ್ರಮಕ್ಕೋ ಬಿಟ್ಟು ಹೋಗುವ ಪದ್ಧತಿ ಮುಂದುವರೆಯುತ್ತಲೇ ಬಂದಿದೆ. ಇದೇ ರೀತಿ ತಮಗೆ ಹೆಣ್ಣು ಮಗು ಹುಟ್ಟಿತೆಂದು ಅದರ ಮುಖವನ್ನೂ ನೋಡದೇ ಹಡೆದವ್ವಳೇ ಬಿಟ್ಟು ಹೋಗಿದ್ದಾಳೆ. ಅದಕ್ಕೆ ಜನ್ಮ ಕೊಟ್ಟ ಆಕೆಯೂ ಕೂಡ ಹೆಣ್ಣು ಎಂಬುದನ್ನೇ ಮರೆತು ತನ್ನ ಕರುಳ ಬಳ್ಳಿಯನ್ನೇ ಕತ್ತರಿಸಿಟ್ಟು ಹೋಗಿದ್ದಾಳೆ. ಹೀಗೆ ತಂದೆ, ತಾಯಿಯಿಂದ ದೂರವಾದ ಆ ಹೆಣ್ಣು ಮಗು ಬೆಳೆದು ದೊಡ್ಡದಾಗಿ ಇದೀಗ ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದೆ. ಇದೇನಪ್ಪ ಅಂತೀರಾ ಈ ಸ್ಟೋರಿ ನೋಡಿ..
ಹೀಗೆ ಚಿನ್ನದ ಪದಕಗಳನ್ನು ಕೊರಳಲ್ಲಿ ಹಾಕಿಕೊಂಡು ಟ್ರೋಫಿಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ಬಾಲಕಿ ಹೆಸರು ಸಾದಿಕಾ ಅತ್ತಾರ ವಯಸ್ಸು ಈಗಷ್ಟೆ 13 ವರ್ಷ. ವಿದ್ಯಾಗಿರಿ ದಾನೇಶ್ವರ ನಗರದ ನಿವಾಸಿ. ಈ ಸಣ್ಣ ವಯಸ್ಸಿನಲ್ಲೇ ಮೂರು ಚಿನ್ನದ ಪದಕಗಳನ್ನು ಪಡೆದ ಹಿರಿಮೆ ಈಕೆಯದ್ದು. ತಂದೆ, ತಾಯಿ ಬಿಟ್ಟು ಹೋದರು ಎಂಬ ಕೊರಗಿಲ್ಲದಂತೆ ಈಕೆಯನ್ನು ಜೋಪಾನ ಮಾಡಿದ್ದಾರೆ ಈಕೆಯ ಸೋದರ ಮಾವಂದಿರು ಹಾಗೂ ಚಿಕ್ಕಮ್ಮಂದಿರು.
ಹೌದು! ಸಾದಿಕಾ ಹುಟ್ಟಿದಾಗ ಈ ಮಗು ಹೆಣ್ಣು ಎಂದು ಆಕೆಯ ತಂದೆ, ತಾಯಿ ಈಕೆಯನ್ನು ಬಿಟ್ಟು ಹೋದರು. ನಂತರ ಈ ಮಗುವನ್ನು ಆಕೆಯ ಸೋದರ ಮಾವಂದಿರು ಹಾಗೂ ಈ ಮಗುವಿನ ತಾಯಿಯ ಸಹೋದರಿಯರು ಮಗುವನ್ನು ಜೋಪಾನ ಮಾಡಿದ್ದಾರೆ. ಈ ಬಾಲಕಿ ಸೋದರ ಮಾವ ಮಹ್ಮದಗೌಸ್ ಕಳಸಾಪುರ ಜಿಮ್ ತರಬೇತುದಾರ. ಅಲ್ಲದೇ ಈ ಬಾಲಕಿಗೆ ಸ್ವತಃ ಬಾರ ಎತ್ತುವ (ಸ್ಟ್ರೆಂಥ್ ಲಿಫ್ಟಿಂಗ್) ತರಬೇತಿಯನ್ನು ಕೂಡ ನೀಡಿದ್ದಾರೆ.
ಹೀಗೆ ಮಾವನಿಂದ ತರಬೇತಿ ಪಡೆದ ಈ ಬಾಲಕಿ ದಾವಣಗೆರೆಯ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ನಡೆದ ಬಾರ ಎತ್ತುವ (ಸ್ಟ್ರೆಂಥ್ ಲಿಫ್ಟಿಂಗ್) ಸ್ಪರ್ಧೆಯಲ್ಲಿ 52 ಕೆಜಿ ಬಾರ ಎತ್ತುವ ವಿಭಾಗದಲ್ಲಿ ಜೂನಿಯರ್, ಸಬ್ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾಳೆ. ಈಕೆಗೆ ಜನ್ಮ ಕೊಟ್ಟ ಜನ್ಮದಾತರು ಬಾಲಕಿ ಹೇಗಿದ್ದಾಳೆ ಎಂದು ತಿರುಗಿ ಸಹ ನೋಡಿಲ್ಲ. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡಿರುವ ಬಾಲಕಿ ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸಲು ಸಾಧನೆಯ ಹಾದಿ ಹಿಡಿದಿದ್ದಾಳೆ.
Kshetra Samachara
31/01/2021 08:28 am