ಹುಬ್ಬಳ್ಳಿ: ಭಾರತ ಆತ್ಮನಿರ್ಭರತೆಯೊಂದಿಗೆ ಮುಂದೆ ಸಾಗುತ್ತಿರುವಾಗ, ವೀರ ಸಾವರ್ಕರ್ ಅವರ ಬಗ್ಗೆ ಹಸಿ ಸುಳ್ಳುಗಳ ಅಪ್ರಪ್ರಚಾರ ನಿಲ್ಲಿಸಬೇಕು. ಇಲ್ಲವಾದರೆ ನಾವು ನಿಲ್ಲಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಎಚ್ಚರಿಕೆ ನೀಡಿದರು.
ಸವಾಯಿ ಗಂಧರ್ವ ಸಭಾಭವನದಲ್ಲಿ ಸ್ವರಾಜ್-75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಕೇವಲ ಎಡಪಂಥೀಯ ವಿಚಾರಧಾರೆ, ಮತ ತುಷ್ಠೀಕರಣಕ್ಕಾಗಿ ಹಸಿ ಸುಳ್ಳುಗಳನ್ನು ಹಬ್ಬಿಸಲು ಮುಂದಾದರೆ ಸಹಿಸಿಕೊಳ್ಳಲಾಗದು. ಇಂತಹ ಕಾರಣಗಳಿಂದ ದೇಶ ಅಪಾಯ ಸ್ಥಿತಿ ಎದುರಿಸುವಂತಾಗಿದೆ.
ಭಾರತ ಮಾತಾಕಿ ಜೈ ಎಂದರೆ ಆರ್ ಎಸ್‌ಎಸ್ ಕಾರ್ಯಕ್ರಮ ಎಂದು, ವಂದೇಮಾತರಂ ಹಾಡಿದರೆ ಎಬಿವಿಪಿ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ. ಭಾರತ ಮಾತೆಗೆ ಜೈ ಎನ್ನುವುದಕ್ಕೆ ನಿಮಗೆ ಮನಸಿಲ್ಲ ಎಂದರೆ ನಾವೇನು ಮಾಡಲಾಗುತ್ತಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಕೇವಲ ಗಾಂಧೀಜಿ ಒಬ್ಬರಿಂದಲೇ ಎಂದರೆ ಉಳಿದ ಹೋರಟಗಾರಿಗೆ ಅವಮಾನ ಮಾಡಿದಂತೆ. ಗಾಂಧಿಜೀಯವರ ಬಗ್ಗೆ ಪೂರ್ಣ ಶ್ರದ್ಧೆಯಿಂದಲೇ ನಾನು ಈ ಮಾತು ಹೇಳುತ್ತೇನೆ. ಅನೇಕ ನಾಯಕರು ಅಲ್ಲದೆ ಸಾಹಿತಿಗಳು, ಕಲಾವಿದರು, ಮಹಿಳೆಯರು, ಬಾಲಕರು, ಯುವಕರು ಹೀಗೆ ಅನೇಕರು ತ್ಯಾಗ, ಬಲಿದಾನ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅಸಹಕಾರ ಚಳವಳಿ ಮಹತ್ವದ ಕೊಡುಗೆ ನೀಡಿದೆ ಎನ್ನಬಹುದು ಎಂದರು.
ನಮ್ಮ ದೇಶಕ್ಕೆ ಎಡಪಂಥೀಯ ವಿಚಾರ ಧಾರೆ ಮಾಡಿದಷ್ಟು ಅನ್ಯಾಯ ಜಗತ್ತಿನ ಬೇರಾವ ದೇಶದಲ್ಲೂ ಆಗಿಲ್ಲ. ವರ್ಷಕ್ಕೆ ಸರಾಸರಿ 32 ಲಕ್ಷ ಜನ ತಾಜ್ ಮಹಲ್ ಗೆ ಭೇಟಿ ನೋಡುತ್ತಾರೆ. ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ಸ್ಥಳಕ್ಕೆ ಸೇರಿದಂತೆ ದೇಶಕ್ಕಾಗಿ ತ್ಯಾಗಮಾಡಿದ ಯೋಧರ ಸ್ಥಳಗಳಿಗೆ ಎಷ್ಟು ಜನ ಭೇಟಿ ನೀಡುತ್ತಾರೆ ಎಂಬ ಆತ್ಮಾವಲೋಕನ ಅಗತ್ಯ. ಮಕ್ಕಳಿಗೆ ಇದರ ಮನವರಿಕೆ ಆಬೇಕಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/10/2022 05:48 pm