ಓದಿದ್ದು ಎಂಬಿಎ. ಆದ್ರೆ ಮಾಡುತ್ತಿರುವುದು ಕೃಷಿ ಕಾಯಕ. ಲೋಕಕ್ಕೆ ಅನ್ನ ಹಾಕುವ ಕೆಲಸಕ್ಕಿಂತ ಉನ್ನತವಾದ ಕೆಲಸ ಇನ್ನೊಂದಿಲ್ಲ. ಬ್ಯುಸಿನೆಸ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಲಕ್ಷ ಸಂಬಳ ಪಡೆಯುವ ಉದ್ಯೋಗ ಹುಡುಕದೇ ಊರಿಗೆ ಬಂದು ಕೃಷಿ ಮಾಡ್ತಿದ್ದಾರೆ ಈ ರೈತ. ಇನ್ನೊಬ್ಬರ ಸಂಸ್ಥೆಯಲ್ಲಿ ನೌಕರನಾಗಿ ದುಡಿಯೋದಕ್ಕಿಂತ ತನ್ನದೇ ಜಮೀನಿನಲ್ಲಿ ಮಾಲೀಕನಾಗಿ ದುಡಿಯೋದು ಉತ್ತಮ ಎಂದುಕೊಂಡು ಪೂರ್ಣಾವಧಿ ಕೃಷಿಕರಾಗಿದ್ದಾರೆ.
ಅಂದ್ ಹಾಗೆ ಇವರ ಹೆಸರು ಸಂತೋಷ್ ಶೆರೆವಾಡ. ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಸಾವಯವ ಕೃಷಿಕ. ತಮ್ಮ 10 ಎಕರೆ ಜಾಗದಲ್ಲಿ ಹಸಿರ ಸಿರಿ ಬೆಳೆಯುತ್ತಿದ್ದಾರೆ. ಮುಂಗಾರು ಹಂಗಾಮು ಅಷ್ಟೇ ಅಲ್ಲ. ಹಿಂಗಾರಿನಲ್ಲೂ ಹಚ್ಚ ಹಸುರಿನ ಬೆಳೆ ಇವರ ಹೊಲದಲ್ಲಿ ಕಂಗೊಳಿಸುತ್ತೆ. ಹಿಂಗಾರಿನಲ್ಲೂ ಬೆಳೆ ಹಚ್ಚ ಹಸಿರಾಗೋದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು...ಅದರ ಹಿಂದಿನ ಸೂತ್ರಧಾರ ಅಂದ್ರೆ, ಅದೇ ದೇಶಪಾಂಡೆ ಫೌಂಡೇಶನ್.
ತಮ್ಮ ಸ್ನೇಹಿತರ ಮೂಲಕ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡದ ಬಗ್ಗೆ ಕೇಳಿ ತಿಳಿದ ಅನ್ನದಾತ ಸಂತೋಷ್, ಆ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದಾರೆ. ನಂತರ ದೇಶಪಾಂಡೆ ಫೌಂಡೇಶನ್ ಪ್ರತಿನಿಧಿಗಳನ್ನು ಸಂಪರ್ಕಿಸಿ ಅವರ ನೆರವಿನಿಂದ ತಮ್ಮ ಹೊಲದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಈಗ ಅದೇ ನೀರು ಬಳಸಿ ಸಮೃದ್ಧ ಸಿರಿಧಾನ್ಯ ಬೆಳೆಯುತ್ತಿದ್ದಾರೆ.
ಕೃಷಿಹೊಂಡದಿಂದ ಕೇವಲ ಉತ್ತಮ ಇಳುವರಿ ಅಷ್ಟೇ ಅಲ್ಲ. ಮಣ್ಣಿನ ಫಲವತ್ತತೆ , ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಆರೋಗ್ಯಕರ ಫಸಲು ಪಡೆಯಬಹುದು. ಅತಿಯಾದ ಬೋರ್ ವೆಲ್ ನೀರು ಬಳಕೆಯಿಂದ ಅದರಲ್ಲಿನ ಆರ್ಸೆನಿಕ್ ಪ್ರಮಾಣ ಮಣ್ಣಿನಲ್ಲಿ ಇರುವ ಬೆಳೆಯುವ ಗುಣವನ್ನು ಕಡಿಮೆ ಮಾಡುತ್ತೆ. ಹೀಗಾಗಿ ಬೋರ್ ವೆಲ್ ಕೊರೆಸೋದಕ್ಕಿಂತ ಕೃಷಿಹೊಂಡವೇ ಉತ್ತಮ ಅಂತಾರೆ ಪರಂಪರಾಗತ ಕೃಷಿಕ ಸಂತೋಷ್ ಶೆರೆವಾಡ ಅವರು. ಕೃಷಿಹೊಂಡ ನಿರ್ಮಾಣಕ್ಕಿಂತ ಮೊದಲು ಹೆಸರುಬೇಳೆ, ಜೋಳ ಬೆಳೆಯುತ್ತಿದ್ದ ಇವರು ಕೃಷಿಹೊಂಡ ನಿರ್ಮಿಸಿಕೊಂಡ ನಂತರ ಉಳ್ಳಾಗಡ್ಡಿ, ಮೆಕ್ಕೆಜೋಳ, ಹೆಸರುಬೇಳೆ, ಕಡಲೆ, ಹಾಗೂ ಗೋಧಿ ಬೆಳೆಯುತ್ತಿದ್ದಾರೆ. ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚು ಇಳುವರಿ ಪಡೆದು ಸಕ್ಸಸ್ ಆಗಿದ್ದಾರೆ. ವರ್ಷಕ್ಕೆ 3 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಇದಿಷ್ಟೇ ಅಲ್ಲ ಫಾರ್ಮರ್ ಪ್ರೊಡಕ್ಷನ್ ಆರ್ಗನೈಜೇಷನ್ ನ ಕಲ್ಮೇಶ್ವರ ಸಂಘದ ರೈತ ಜಾಗೃತಿ ಕೆಲಸಗಳನ್ನೂ ಇವರು ಮಾಡ್ತಿದ್ದಾರೆ. ಆ ಮೂಲಕ ಗುಣಮಟ್ಟದ ಸಂಸ್ಕರಿತ ಬೀಜ, ಗೊಬ್ಬರ, ಒದಗಿಸುವ ನಿಸ್ವಾರ್ಥ ಕೆಲಸವನ್ನೂ ಮಾಡ್ತಿದ್ದಾರೆ.
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವಾ..ಇವಳದೇನು ಕರುಣೆ ಪ್ರೀತಿಯೋ...ಈ ಸುಗ್ಗಿ ತಂದವಳಾರಮ್ಮ ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಎಂಬ ಕವಿನುಡಿಯಂತೆ ಸಂತೋಷ್ ಅವರು ಖುಷಿಯಿಂದ ಕೃಷಿ ಮಾಡ್ತಿದ್ದಾರೆ. ಜಗಕೆ ಅನ್ನ ಹಾಕುವ ಪವಿತ್ರ ಕಾಯಕ ಮಾಡ್ತಿದ್ದಾರೆ.
Kshetra Samachara
05/02/2021 05:43 pm