ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಆಗಸ್ಟ್ ತಿಂಗಳಲ್ಲಿ ಈವರೆಗೆ 482 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 7 ರಂದು ಜಿಲ್ಲೆಯಲ್ಲಿ ಒಟ್ಟು 338 ಸಕ್ರಿಯ ಪ್ರಕರಣಗಳಿವೆ. 33 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಓರ್ವ ವ್ಯಕ್ತಿ ಮೃತ ಪಟ್ಟಿದ್ದಾರೆ. 305 ರೋಗಿಗಳು ಮನೆಯಲ್ಲಿಯೇ ಇದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಕಳೆದ 7 ದಿನಗಳ ಅವಧಿಯಲ್ಲಿ ಶೇ. 11.09 ಪಾಸಿಟಿವಿಟಿ ದರವಿದೆ. ಮುನ್ನೆಚ್ಚರಿಕೆ ಲಸಿಕೆ ಮೂಲಕ ಸೋಂಕು ತಡೆಯಬಹುದು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತಕ್ಷಣ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಚಿಕಿತ್ಸೆಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 3,425 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 1,902 ಆಮ್ಲಜನಕ ಪೂರೈಕೆ ಸೌಲಭ್ಯವುಳ್ಳ ಹಾಸಿಗೆಗಳು, 356 ಐಸಿಯು ಹಾಸಿಗೆಗಳು ಹಾಗೂ 195 ವ್ಹೆಂಟಿಲೇಟರ್ ಸೌಲಭ್ಯವಿರುವ ಹಾಸಿಗೆಗಳು ಲಭ್ಯವಿರುತ್ತವೆ.
ಕೋವಿಡ್-19 ಲಸಿಕಾ ಕಾರ್ಯಕ್ರಮವೂ ಪ್ರಗತಿಯಲ್ಲಿದೆ. 18 ವರ್ಷದ ಮೇಲ್ಪಟ್ಟವರಿಗೆ 1ನೇ ಡೋಸಿನ 14,44,000 ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 15,08,467 ಲಸಿಕೆ ನೀಡಿ, ಪ್ರತಿಶತ 104.46 ಪ್ರಗತಿಯನ್ನು ಸಾಧಿಸಲಾಗಿದೆ. 15,18,666 ಎರಡನೇ ಡೋಸಿನ ಲಸಿಕೆಯನ್ನು ನೀಡಿ ಪ್ರತಿಶತ 105.17 ಸಾಧನೆ ಮಾಡಲಾಗಿದೆ. ಶಾಲೆಗಳಲ್ಲಿ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿದೆ. 15 ರಿಂದ 17 ವರ್ಷದ 95,744 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ. ಪ್ರಥಮ ಡೋಸ್ 83,806 ಆಗಿದ್ದು ಪ್ರತಿಶತ 87.50 ರಷ್ಟು ಸಾಧಿಸಲಾಗಿದೆ. ಇಲ್ಲಿಯವರೆಗೆ 77,205 ಎರಡನೇ ಡೋಸ್ ನೀಡಲಾಗಿದ್ದು, ಪ್ರತಿಶತ 80.61 ರಷ್ಟು ಸಾಧಿಸಲಾಗಿದೆ. 12 ವರ್ಷದಿಂದ 14 ವರ್ಷದ 60,020 ಮಕ್ಕಳಿಗೆ ಕೋವಿಡ್ ಲಸಿಕೆ ಗುರಿ ಇದೆ. ಇಲ್ಲಿಯವರೆಗೆ ಪ್ರಥಮ ಡೋಸಿನಲ್ಲಿ 72,524 ಮಕ್ಕಳಿಗೆ ಲಸಿಕೆಯನ್ನು ನೀಡಿದ್ದು, ಪ್ರಗತಿಯು ಶೇ.120.83 ರಷ್ಟಾಗಿದೆ. 2ನೇ ಡೋಸ್ ಪ್ರಗತಿಯು 53,688 ಆಗಿದ್ದು, ಪ್ರತಿಶತ 89.45 ರಷ್ಟಾಗಿದೆ.
ಮುನ್ನೆಚ್ಚರಿಕೆ ಡೋಸ್ 13,23,626 ಗುರಿ ಇದ್ದು, ಇಲ್ಲಿಯವರೆಗೆ 1,89,551 ಲಸಿಕೆ ನೀಡಿ ಪ್ರತಿಶತ 14.32 ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಕೋವ್ಯಾಕ್ಸಿನ್- 26,350 ಡೋಸ್, ಕೋವಿಶೀಲ್ಡ್-33,020 ಡೋಸ್ ಮತ್ತು ಮಕ್ಕಳಿಗೆ ನೀಡುವ ಕಾರ್ಬಿವ್ಯಾಕ್ಸಿ-3,880 ಡೋಸ್‍ಗಳು ಲಭ್ಯ ಇರುತ್ತವೆ.
ಕಳೆದ ಜನೇವರಿ 1 ರಿಂದ ಆಗಸ್ಟ್ 7ರ ವರೆಗೆ 3,57,732 ಕೋವಿಡ್ ಪ್ರಯೋಗಾಲಯಮಾದರಿ (ಸ್ಯಾಂಪಲ್)ಗಳನ್ನು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 23,793 ಪಾಸಿಟಿವ್ ವರದಿಯಾಗಿದೆ. ಅದರಂತೆ, 23,430 ಕೇಸಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಸಾರ್ವಜನಿಕರು ಕೋವಿಡ್ ಮುನ್ನೆಚರಿಕೆ ಲಸಿಕೆ ಪಡೆದು ಆರೋಗ್ಯ ಕಾಳಜಿವಹಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
Kshetra Samachara
08/08/2022 07:58 pm