ಧಾರವಾಡ: ಎದೆ ಹಾಲಿಗೆ ಅದರದ್ದೇ ಆದ ಶಕ್ತಿ ಇದೆ. ಈ ಎದೆ ಹಾಲನ್ನು ಅಮೃತಕ್ಕೆ ಹೋಲಿಕೆ ಮಾಡಲಾಗುತ್ತದೆ. ಆದರೆ, ಅವಧಿಗೆ ಪೂರ್ಣ ಜನಿಸಿದ ಮಕ್ಕಳಿಗೆ ಎದೆ ಹಾಲಿನ ಕೊರತೆಯುಂಟಾಗಬಾರದು ಎಂದು ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ ವಿನೂತನ ಪ್ರಯತ್ನಕ್ಕೆ ಮುಂದಾಗಿವೆ.
ಹೌದು! ರಕ್ತ ಬ್ಯಾಂಕ್, ನೇತ್ರ ಬ್ಯಾಂಕ್‌ನಂತೆಯೇ ಇದೀಗ ತಾಯಿ ಎದೆ ಹಾಲಿನ ಬ್ಯಾಂಕ್‌ನ್ನು ಮೊಟ್ಟ ಮೊದಲ ಬಾರಿಗೆ ಧಾರವಾಡದಲ್ಲಿ ಆರಂಭಿಸಿವೆ. ಇದಕ್ಕೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಹಕಾರ ನೀಡಿದೆ.
ಅವಧಿಗೆ ಮುನ್ನ ಜನಿಸಿದ ಮಕ್ಕಳಿಗೆ ಎದೆ ಹಾಲಿನ ಕೊರತೆಯುಂಟಾಗುತ್ತದೆ. ಹೀಗೆ ಹಾಲಿನ ಕೊರತೆ ಎದುರಿಸುವ ಶಿಶುಗಳಿಗಾಗಿಯೇ ಈ ಎದೆ ಹಾಲಿನ ಬ್ಯಾಂಕ್ ತೆರೆಯಲಾಗಿದೆ. ಎದೆ ಹಾಲು ಹೇರಳವಾಗಿರುವ ಬಾಣಂತಿಯರು ಹೆಚ್ಚಿನ ಹಾಲನ್ನು ದಾನ ಮಾಡಬಹುದು. ಹೀಗೆ ದಾನ ಮಾಡಿದ ಹಾಲು ಇತರ ಶಿಶುಗಳಿಗೆ ಅನುಕೂಲವಾಗಲಿದೆ. ಈ ಹಾಲನ್ನು ಸ್ಟಿರಾಯ್ಡ್ ಮಾಡಿ ಸಂಸ್ಕರಿಸಲಾಗುತ್ತದೆ. ಆರು ತಿಂಗಳ ಕಾಲ 20 ಡಿಗ್ರಿಯಲ್ಲಿ ಇದನ್ನು ಸಂಗ್ರಹಿಸಿಡಬಹುದಾಗಿದೆ. ಈ ಹಾಲು ಅವಧಿಗೆ ಮುನ್ನ ಜನಿಸಿದ ನವಜಾತ ಶಿಶುಗಳಿಗೆ ಕುಡಿಯಲು ಯೋಗ್ಯವಾಗಿರುತ್ತದೆ.
ಅವಧಿಗೆ ಮುನ್ನ ಜನಿಸಿದ ಮಕ್ಕಳು ಹಾಲಿನ ಕೊರತೆಯುಂಟಾಗಿ ಮರಣ ಹೊಂದುತ್ತವೆ. ಇಂತಹ ಜೀವಗಳನ್ನು ಉಳಿಸುವಲ್ಲಿ ಈ ಎದೆ ಹಾಲಿನ ಬ್ಯಾಂಕ್‌ನ ಪಾತ್ರ ಮುಖ್ಯವಾಗಿರುತ್ತದೆ. ಈ ಎಲ್ಲ ಸಮಸ್ಯೆಯನ್ನು ಪರಿಗಣಿಸಿ ಎಸ್‌ಡಿಎಂ ಆಸ್ಪತ್ರೆ, ರೋಟರಿ ಕ್ಲಬ್ ಹಾಗೂ ಕೆವಿಜಿ ಬ್ಯಾಂಕ್ ಒಟ್ಟುಗೂಡಿಕೊಂಡು ಸುಮಾರು 260 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಎದೆ ಹಾಲಿನ ಬ್ಯಾಂಕ್‌ನ್ನು ಸ್ಥಾಪನೆ ಮಾಡಿವೆ.
ಹೇರಳವಾಗಿ ಎದೆ ಹಾಲು ಹೊಂದಿರುವ ಬಾಣಂತಿಯರು ಹಾಲು ದಾನ ಮಾಡುವ ಬಗ್ಗೆ ಜಾಗೃತಿ ಸಹ ಮೂಡಿಸಲಾಗುತ್ತಿದ್ದು, ಇದಕ್ಕೆ ಇತರ ಸಂಸ್ಥೆಗಳು ಕೂಡ ಕೈ ಜೋಡಿಸಿವೆ. ಎಸ್‌ಡಿಎಂ ಆಸ್ಪತ್ರೆಯಲ್ಲೇ ಬಾಣಂತಿಯರಿಗೆ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದ್ದು, ವಿಶೇಷವಾಗಿ ಒಂದು ತಿಂಗಳ ಒಳಗಾಗಿ ಸಾಧ್ಯವಾದಷ್ಟು ಅವಧಿಗೆ ಪೂರ್ಣ ಜನಿಸಿದ ಮಕ್ಕಳಿಗೆ ಎದೆ ಹಾಲು ಪೂರೈಕೆ ಮಾಡುವ ಉದ್ದೇಶವನ್ನೂ ಮೂರೂ ಸಂಸ್ಥೆಗಳು ಹೊಂದಿವೆ. ಈ ಎದೆ ಹಾಲಿನ ಬ್ಯಾಂಕ್ ಬುಧವಾರ ಲೋಕಾರ್ಪಣೆಗೊಂಡಿದ್ದು, ಇನ್ನು ಮುಂದೆ ಹಾಲಿನ ಕೊರತೆ ಎದುರಿಸುತ್ತಿರುವ ನವಜಾತ ಶಿಶುಗಳ ಪಾಲಿಗೆ ವರದಾನವಾಗಿ ಮಾರ್ಪಡುವುದರಲ್ಲಿ ಯಾವುದೇ ಸಂಶಯವಿಲ್ಲ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
29/06/2022 06:27 pm