ಹುಬ್ಬಳ್ಳಿ: ಹುಬ್ಬಳ್ಳಿಯ ಆದರ್ಶ ನಗರದ ರೋಟರಿ ಶಾಲೆಯ ಓರ್ವ ವಿದ್ಯಾರ್ಥಿಗೆ ಕೊರೊನಾ ಪೊಸಿಟಿವ್ ಕಂಡು ಬಂದಿದ್ದರಿಂದ ಸೋಮವಾರದವರೆಗೆ ಶಾಲೆಗೆ ರಜೆ ಘೋಷಿಸಲಾಗಿದೆ.
ವಿದ್ಯಾರ್ಥಿಯ ಸಹೋದರಿ ಎಸ್ ಡಿಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರಿಂದ ಈತನಿಗೂ ಕೋವಿಡ್ ಸೋಂಕಾಗಿರಬಹುದೆಂದು ಶಂಕಿಸಲಾಗಿದೆ.
ಎಸ್ ಡಿಎಂ ವೈದ್ಯಕೀಯ ಕಾಲೇಜಿನ 216 ಜನ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 25 ರಿಂದ ಆಸ್ಪತ್ರೆಯ ಓಪಿಡಿ ಬಂದ್ ಮಾಡಲಾಗಿದೆಯಲ್ಲದೆ ಎರಡು ಹಾಸ್ಟೆಲ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸವಿರುವ ಆದರ್ಶನಗರದ ರೋಟರಿ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಕೊರೊನಾ ಖಚಿತ ಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿಗೊಳಗಾದ 9ನೇ ತರಗತಿ ವಿದ್ಯಾರ್ಥಿ ಕಳೆದ ಎರಡು ಮೂರು ದಿನಗಳಿಂದ ಶಾಲೆಗೆ ಗೈರಾಗಿದ್ದ. ಆ ನಂತರ ವಿದ್ಯಾರ್ಥಿಗೆ ಇಂದು ಕೋವಿಡ್ ಖಚಿತ ಪಟ್ಟಿದ್ದರಿಂದ ಪಾಲಕರು ಶಾಲೆಗೆ ಈ ವಿಷಯ ತಿಳಿಸಿದ ತಕ್ಷಣ ಆಡಳಿತ ಮಂಡಳಿ ಇಂದು ಎಲ್ಲ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿತಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ವಿಷಯ ತಿಳಿಸಿ ಮುಂದಿನ ಸೋಮವಾರದವರೆಗೆ ಎಲ್ಲ ತರಗತಿಗಳಿಗೂ ರಜೆ ಘೋಷಿಸಿದೆ.
ರೋಟರಿ ಶಾಲೆ ಆಡಳಿತ ಮಂಡಳಿ ಈಗಾಗಲೇ ಆದರ್ಶನಗರ ಹೈಸ್ಕೂಲ್ ವಿಭಾಗದ ಎಲ್ಲ ತರಗತಿಗಳ ವಿದ್ಯಾರ್ಥಿಗಳ ಪಾಲಕರಿಗೆ ಮಕ್ಕಳ ಆರ್ ಟಿಪಿಸಿಆರ್ ಮಾಡಿಸುವಂತೆ ಮನವಿ ಮಾಡಿದೆ.
ಸದ್ಯ ಸೋಮವಾರದವರೆಗೆ ರಜಾ ನೀಡಲಾಗಿದ್ದು, ಮುಂದೆ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.
Kshetra Samachara
01/12/2021 04:27 pm