ಹುಬ್ಬಳ್ಳಿ: ಆಕೆ ಇನ್ನೂ ಕಾಲೇಜು ಕಲಿಯುತ್ತಿರುವ ವಿದ್ಯಾರ್ಥಿನಿ. ಆದರೆ ಆಕೆಯಲ್ಲಿರುವ ಕಲೆ ಮಾತ್ರ ಆ ಯುವತಿಯನ್ನು ಬೆಳ್ಳಿತೆರೆಗೆ ಕರೆದುಕೊಂಡು ಬಂದಿದೆ. ತನ್ನಲ್ಲಿರುವ ಅಗಾಧವಾದ ಕಲೆಯನ್ನು ಪ್ರದರ್ಶಿಸುವ ಸದುದ್ದೇಶದಿಂದ ಯುವತಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾಳೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬುವಂತೆ ಕೋಲಾರದ ಹುಡುಗಿ ಧಾರವಾಡ ಜಿಲ್ಲೆಯ ಚಿತ್ರವೊಂದರಲ್ಲಿ ಮಿಂಚುತ್ತಿದ್ದಾಳೆ.
ಹೌದು.ಹೀಗೆ ನೃತ್ಯ ರೂಪಕಗಳಲ್ಲಿ ವಿವಿಧ ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿರುವ ಕಲಾವಿದೆಯ ಹೆಸರು ರೂಪಾ ಬಾಬು. ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಿರೂಪಾಕ್ಷ ಗ್ರಾಮದ ಈ ಕಲಾವಿದೆ. ಆಳ್ವಾಸ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವಾಗಲೇ ಚಿತ್ರವೊಂದರ ನಾಯಕ ನಟಿಯಾಗಿ ಅಭಿನಯಿಸುವ ಮೂಲಕ ತನ್ನಲ್ಲಿರುವ ಪ್ರತಿಭೆಯ ಅನಾವರಣ ಮಾಡಿದ್ದಾರೆ.
ರವೀಂದ್ರ ಬಾಬು ಹಾಗೂ ಭಾಗ್ಯಲಕ್ಷ್ಮೀಯವರ ಮುದ್ದಿನ ಮಗಳಾಗಿ ಬೆಳೆದಿರುವ ಈ ಯುವತಿ, ತನ್ನಲ್ಲಿರುವ ಅಭೂತಪೂರ್ವ ಕಲೆಯಿಂದ ಈಗ "ಮಾರಿಗಡ" ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುವ ಮೂಲಕ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಶಾಲಾ ಹಾಗೂ ಕಾಲೇಜಿನ ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಅಭಿನಯದ ಸಾಕಷ್ಟು ಅನುಭವ ಪಡೆದಿರುವ ಈ ಯುವತಿ ಈಗ ನಾಯಕ ನಟಿಯಾಗಿ ಬಿಂಬಿತವಾಗಿದ್ದಾಳೆ.
ಇನ್ನೂ ಗ್ರಾಮೀಣ ಭಾಗದಲ್ಲಿ ಬೆಳೆದಿರುವ ಈ ಪ್ರತಿಭೆ ಈಗ ಚಿತ್ರರಂಗದಲ್ಲಿ ಬಹುದೊಡ್ಡ ಪಾತ್ರ ನಿರ್ವಹಣೆ ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಫ್ಯಾಷನ್ ಡಿಸೈನರ್ ಆಗಬೇಕು ಎಂದು ಕನಸು ಕಂಡಿದ್ದ ರೂಪಾ, ಈಗ ಹೀರೋಯಿನ್ ಆಗಿ ಅಭಿನಯಿಸುತ್ತಿದ್ದಾಳೆ. ಕಲೆ ಎಲ್ಲರನ್ನೂ ಕೈ ಮಾಡಿ ಕರೆಯುತ್ತದೆ. ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತದೆ ಎಂಬುವಂತೇ ಯುವ ಪ್ರತಿಭೆ ರೂಪಾ ಬೆಳೆತೆರೆಗೆ ಎಂಟ್ರಿ ಹೊಡೆದಿದ್ದಾಳೆ.
ಒಟ್ಟಿನಲ್ಲಿ ಕೋಲಾರದ ಪ್ರತಿಭೆ ಈಗ ಧಾರವಾಡ ಜಿಲ್ಲೆಯ ಚಿತ್ರವೊಂದರಲ್ಲಿ ಅಭಿನಯಿಸುವ ಮೂಲಕ ತನ್ನ ಅಭಿನಯದ ಕರೀಯರ್ ಅನ್ನ ಶಿಕ್ಷಣ ಕಾಶಿಯಿಂದಲೇ ಆರಂಭ ಮಾಡಿರುವುದು ವಿಶೇಷವಾಗಿದೆ. ಈ ಪ್ರತಿಭೆಯ ಕೀರ್ತಿ ಮತ್ತಷ್ಟು ಹೆಚ್ಚಲಿ. ಇನ್ನೂ ಹೆಚ್ಚಿನ ಅವಕಾಶಗಳು ದೊರೆಯಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ ಮಲ್ಲೇಶ್ ಸೂರಣಗಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/06/2022 03:24 pm