ವಿದ್ಯಾಕಾಶಿ, ಶಿಕ್ಷಣ ಕಾಶಿ ಎಂದೆಲ್ಲ ಹೆಗ್ಗಳಿಕೆಗೆ ಪಾತ್ರವಾದ ಧಾರವಾಡ ಜಿಲ್ಲೆಯ ಅವಿಭಾಜ್ಯ ಅಂಗವಾದ ನವಲಗುಂದ ಪಟ್ಟಣದಲ್ಲಿ ಸರ್ಕಾರಿ ಶಾಲೆಗೊಂದು ಸ್ವಂತ ಕಟ್ಟಡವಿಲ್ಲದೆ, ವಿದ್ಯಾರ್ಥಿಗಳು ಕಳೆದ 24 ವರ್ಷಗಳಿಂದ ದೇವಸ್ಥಾನದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇಂತಹ ದುಸ್ಥಿತಿಯಲ್ಲಿರೋದು ನವಲಗುಂದ ಪಟ್ಟಣದ ತಗ್ಗಿನಕೇರಿ ಓಣಿಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂಬರ್ 9. ಈ ಬಗ್ಗೆ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಕಾರಣ ಕಟ್ಟಡ ನಿರ್ಮಾಣಕ್ಕೆ ಸ್ಥಳವಿಲ್ಲ ಅನ್ನೋದು. ಈ ಶಾಲೆಯಲ್ಲಿ 1 ರಿಂದ 4 ರ ವೆರೆಗಿನ ತರಗತಿಗಳಲ್ಲಿ ಒಟ್ಟು 38 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಒಂದೇ ಸ್ಥಳದಲ್ಲಿ ಕೂತು ಕಲಿಯುವ ದುಸ್ಥಿತಿ.
ಶಾಲಾ ಕಟ್ಟಡ ವಿಲ್ಲದೆ ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆ ಅಂದ್ರೆ ಶೌಚಾಲಯ. ಇಲ್ಲಿನ ಇಬ್ಬರು ಸಿಬ್ಬಂದಿ ಸೇರಿ ವಿದ್ಯಾರ್ಥಿಗಳು ಶೌಚಕ್ಕೆ ತೆರಳಬೇಕಾದರೆ, ಮನೆಗೆ ಹೋಗಬೇಕು ಇಲ್ಲವಾದರೇ ಸಾರ್ವಜನಿಕ ಶೌಚಾಲಯ ಹುಡುಕುತ್ತಾ ಹೋಗಬೇಕು. ದೇವಸ್ಥಾನದ ಹಿಂಬದಿ ರಾಷ್ಟ್ರೀಯ ಹೆದ್ದಾರಿ ಇದ್ರೆ, ಪಕ್ಕದಲ್ಲೇ ಬೃಹತ್ ಗಾತ್ರದ ವಾಹನಗಳ ಸಂಚಾರ ಸತತವಾಗಿ ಇರುತ್ತೆ, ಇದರಿಂದ ಪಾಲಕರಲ್ಲಿ ಆತಂಕ ಹೆಚ್ಚಾಗಿದೆ.
ವಿದ್ಯೆಯನ್ನು ಧಾರೆ ಎರೆಯುವ ಸ್ಥಳದಲ್ಲಿ ಈಗ ಸರ್ಕಾರಿ ಕಟ್ಟಡ ಇಲ್ಲದೇ ವಿದ್ಯಾರ್ಥಿಗಳು ಪ್ರತಿ ದಿನ ವಿದ್ಯಾಭ್ಯಾಸ ಮಾಡುವ ದುಸ್ಥಿತಿ, ಶಾಲಾ ನಿರ್ಮಾಣಕ್ಕೆ ಸ್ಥಳ ನೀಡುವವರಿಲ್ಲ ಎಂಬ ಕಾರಣ ಅಧಿಕಾರಿಗಳು ನೀಡುತ್ತಿದ್ದಾರೆ. ಆದರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಕ್ಷೇತ್ರದಲ್ಲಿ ಶಾಲಾ ಕಟ್ಟಡಕ್ಕೆ ಸ್ಥಳ ಸಿಗುತ್ತಿಲ್ಲ ಎಂಬುದು ಮುಜುಗರಕ್ಕೆ ಎಡೆ ಮಾಡುವಂತೆ ಕಾಣುತ್ತಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ; ವಿನೋದ ಇಚ್ಚಂಗಿ, ನವಲಗುಂದ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/10/2022 01:09 pm