ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರದ ಮಹಾ ಎಡವಟ್ಟು- ಪಠ್ಯದಲ್ಲಿ ಹುಬ್ಬಳ್ಳಿ ಹುತಾತ್ಮರ ಹೆಸರೇ ತಪ್ಪು

ಹುಬ್ಬಳ್ಳಿ: ಅಮ್ಮಾ ಬ್ರಿಟಿಷರ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಅದನ್ನು ಕೂಡಿಕೊಳ್ಳಲು ನಾನು ಹೋಗುತ್ತಿದ್ದೇನೆಂದು ಹುತಾತ್ಮನಾಗುವ 13 ವರ್ಷದ ಬಾಲಕನ ಹೆಸರನ್ನು ಇಂದಿಗೂ ವಿದ್ಯಾರ್ಥಿಗಳು ತಪ್ಪಾಗಿ ಕಲಿಯುತ್ತಿದ್ದಾರೆ. ಪಠ್ಯ ಪುಸ್ತಕದಲ್ಲಿ ಬಾಲಕನ ತಂದೆಯ ಹೆಸರು ಹಾಗೂ ಮನೆತನದ ಹೆಸರನ್ನು ಕೂಡ ತಪ್ಪಾಗಿ ಮುದ್ರಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳು ಪುಸ್ತಕದಲ್ಲಿರುವ ತಪ್ಪನ್ನೇ ನೈಜವೆಂದು ಅಭ್ಯಾಸ ಮಾಡುತ್ತಿದ್ದಾರೆ.

ಹೌದು.. ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ ಮೂಮೆಂಟ್) ಚಳುವಳಿಯ ಮೆರವಣಿಗೆ ಪಾಲ್ಗೊಂಡು ಪೊಲೀಸರ ಗುಂಡಿಗೆ ಎದೆಯೊಡ್ಡಿ ವೀರ ಮರಣ ಹೊಂದಿದ ನಾರಾಯಣ ಗೋವಿಂದಪ್ಪ ಡೋಣಿ ವೀರ ಬಾಲಕನ ಇತಿಹಾಸ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುತ್ತದೆ. ಹುಬ್ಬಳ್ಳಿಯ ‌ಮರಾಠಗಲ್ಲಿಯ ನಿವಾಸಿಯಾಗಿದ್ದ ನಾರಾಯಣ ಹದಿಮೂರನೇ ವರ್ಷದವನಿದ್ದಾಗ ಸ್ವತಂತ್ರ ಭಾರತದ ಕನಸು ಕಂಡಿದ್ದ. ಈ ಬಾಲಕನ ಹೆಸರನ್ನೇ ಪಠ್ಯ ಪುಸ್ತಕದಲ್ಲಿ ತಪ್ಪಾಗಿ ಮುದ್ರಿಸಲಾಗಿದೆ. ಬಾಲಕನ ವೀರ, ಶೌರ್ಯವನ್ನು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಎಡವಿದೆ.

ನಾಲ್ಕು ವರ್ಷದ ಹಿಂದೆ ಪರಿಷ್ಕೃತ ಪಠ್ಯಪುಸ್ತಕದಲ್ಲಿಯೇ ಈ ಪ್ರಮಾದವಾಗಿದ್ದು, ಗಂಡು ಮೆಟ್ಟಿದ ನಾಡಿನ ವೀರ ಬಾಲಕ ಹೆಸರನ್ನು ಪಠ್ಯದಲ್ಲಿ ತಪ್ಪಾಗಿ ಬರೆಯಲಾಗಿದೆ. ವಿಪರ್ಯಾಸ ಎಂದರೆ ಇಂದಿಗೂ ಮಕ್ಕಳು ಹುತಾತ್ಮ ವೀರ ಬಾಲಕನ ಹೆಸರನ್ನು ತಪ್ಪಾಗಿಯೇ ಕಲಿಯುತ್ತಿದ್ದಾರೆ. ಕ್ವಿಟ್ ಇಂಡಿಯಾ ಚಳುವಳಿ ಮೆರವಣಿಗೆ ಬೆಂಬಲ ವ್ಯಕ್ತಪಡಿಸಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡ ವೀರ ಬಾಲಕನ ಇತಿಹಾಸವನ್ನು ನೆನಪಿಸುವ ಕೆಲಸ ಆಗಿದ್ದು. ಪ್ರಸ್ತುತ ನಾಲ್ಕನೇ ತರಗತಿಯ ಸವಿ ಕನ್ನಡ ಪಠ್ಯ ಪುಸ್ತಕದಲ್ಲಿ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ವೀರ ಮರಣ ಹೊಂದಿದ ಬಾಲಕನ ನೈಜ ಹೆಸರು ನಾರಾಯಣ ಗೋವಿಂದಪ್ಪ ಡೋಣಿ. ಆದ್ರೆ ಪಠ್ಯ ಪುಸ್ತಕದಲ್ಲಿ ನಾರಾಯಣ ಮಹದೇವ ದೋನಿ ಎಂದು ಬರೆದಿದ್ದಾರೆ.

ನಾಲ್ಕನೇ ತರಗತಿಯ ಸವಿ ಕನ್ನಡ ಅಭ್ಯಾಸ ಸಹಿತ ಪಠ್ಯ ಪುಸ್ತಕದಲ್ಲಿ ಹುತಾತ್ಮ ಬಾಲಕ ಎನ್ನುವ ಗದ್ಯ, 14ನೇ ಪಾಠವಾಗಿದೆ. ಇದು ಪರಿಷ್ಕರಣೆಯ ಸಮಿತಿಯ ರಚನೆಯ ಪಾಠವಾಗಿದೆ. 2014 ನವೆಂಬರ್‌ನಲ್ಲಿ ಅಂದಿನ ಸರಕಾರ 1ರಿಂದ 10ನೇ ತರಗತಿಯವರೆಗಿನ ಪುಸ್ತಕಗಳ ಪರಿಷ್ಕರಣೆಗೆ ಆದೇಶಿಸಿತ್ತು. 2015 ಸೆಪ್ಟಂಬರ್‌ನಲ್ಲಿ ಹೊಸ ಆದೇಶ ಹೊರಡಿಸಿತ್ತು. 2017-18 ನೇ ಸಾಲಿನಿಂದ ಪರಿಷ್ಕೃತ ಪಠ್ಯ ಪುಸ್ತಕಗಳು ಜಾರಿಗೆಯಾಗುವುದಿತ್ತು. ಸಂಘಟನೆಗಳು, ಶಿಕ್ಷಕರು, ಪ್ರಾಧ್ಯಾಪಕರ, ವಿಷಯ ಪರಿವೀಕ್ಷಕರು ಹೀಗೆ ಹಲವರೊಂದಿಗೆ ಸಭೆ, ವಿಮರ್ಶೆ, ಚರ್ಚೆಗಳು ನಡೆದ ನಂತರ ವಿದ್ಯಾರ್ಥಿಗಳ ಕೈ ಸೇರಿತ್ತು. ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆ ಹಾಗೂ ಡಾ.ರಾಜಪ್ಪ ದಳವಾಯಿ ಅಧ್ಯಕ್ಷತೆಯ ಪರಿಷ್ಕರಣೆ ಸಮಿತಿ ಹಾಗೂ ಉನ್ನತ ಪರಿಶೀಲನ ಸಮಿತಿ ಆ ಸಂದರ್ಭದಲ್ಲಿ ಪಠ್ಯ ಪುಸ್ತಕ ಪರಿಷ್ಕರಿಸಿತ್ತು. ಈ ಪಠ್ಯ ಪುಸ್ತಕಕ್ಕೂ ಮುಂಚೆ 9 ನೇ ತರಗತಿಯ ಇಂಗ್ಲೀಷ ಭಾಷಾ ಪಠ್ಯದಲ್ಲಿಯೂ ಕೂಡ ನಾರಾಯಣ ಮಹದೇವ ಡೋಣಿ ಎಂದು ತಪ್ಪಾಗಿ ಮುದ್ರಿಸಲಾಗಿತ್ತು. ಇಲ್ಲಿ ಆಗಿದ್ದ ತಪ್ಪು ನಾಲ್ಕನೇ ಪುಸ್ತಕದಲ್ಲಿಯೂ ಪುನರಾವರ್ತನೆಯಾಗಿದೆ. ಅಲ್ಲಿನ ಪಾಠವನ್ನು ಯಥಾವತ್ತಾಗಿ ನಾಲ್ಕನೇ ತರಗತಿ ಕನ್ನಡ ಪುಸ್ತಕಕ್ಕೆ ಭಾಷಾಂತರ ಮಾಡಿರುವುದು ಈ ಪ್ರಮಾದಕ್ಕೆ ಕಾರಣ ಎನ್ನಲಾಗಿದೆ..

ತಪ್ಪಾಗಿರುವ ಕುರಿತು ನಾರಾಯಣ ಡೋಣಿ ಕುಟುಂಬಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂದು ತಪ್ಪನ್ನು ತಿದ್ದಿಕೊಂಡಿದ್ದರೆ ಈ ತಪ್ಪು ಮರುಕಳಿಸುತ್ತಿರಲಿಲ್ಲ. 9 ನೇ ಪಠ್ಯ ಪುಸ್ತಕದಲ್ಲಿ ತಪ್ಪಾಗಿ ಮುದ್ರಿಸುವ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನಾದ್ರೂ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಆಗಿರುವ ತಪ್ಪನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಸರಿಯಾದ ಇತಿಹಾಸ ತಿಳಿಯುವ ಹಾಗೆ ಮಾಡಬೇಕಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/06/2022 05:24 pm

Cinque Terre

39.52 K

Cinque Terre

0

ಸಂಬಂಧಿತ ಸುದ್ದಿ