ಡಿ.ಸಿ. ಪಾವಟೆ ಅವರು ದಕ್ಷ ಆಡಳಿತಗಾರರಾಗಿ, ಶಿಕ್ಷಣತಜ್ಞರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದವರು.
ದಾನಪ್ಪ ಚಿಂತಪ್ಪ ಪಾವಟೆಯವರು 1899ರ ಆಗಸ್ಟ್ 2ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪುರದಲ್ಲಿ ಜನಿಸಿದರು. ಅವರ ತಂದೆ ಚಿಂತಪ್ಪ ಪಾವಟೆ. ಡಿ.ಸಿ. ಪಾವಟೆ ಅವರ ಪ್ರಾರಂಭಿಕ ಶಿಕ್ಷಣ ಗೋಕಾಕ ಮತ್ತು ಕೊಲ್ಲಾಪುರದಲ್ಲಿ ನಡೆಯಿತು. 1923ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಗಣಿತದ ಪ್ರಥಮ ದರ್ಜೆ ಆನರ್ಸ್ ಪದವಿ ಪಡೆದ ಪಾವಟೆ ಅವರು ಶಿರಸಂಗಿ ಲಿಂಗರಾಜ ಟ್ರಸ್ಟ್ ನೀಡಿದ ಆರ್ಥಿಕ ಬೆಂಬಲದಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಿಡ್ನಿ ಸಸೆಕ್ಸ್ ಕಾಲೇಜು ಸೇರಿ ಗಣಿತಶಾಸ್ತ್ರದ ಟ್ರೈಪ್ರಾಸ್ ಭಾಗ 1 ಮತ್ತು 2ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣತೆ ಸಾಧಿಸಿದರು. 1927ರಲ್ಲಿ ರ್‍ಯಾಂಗ್ಲರ್ ಆಗಿ ಆಯ್ಕೆಗೊಂಡು ಕಾಲೇಜಿನ ಸಂಶೋಧನ ವಿದ್ಯಾರ್ಥಿವೇತನವನ್ನು ಪಡೆದು ಸಂಶೋಧನೆಯನ್ನೂ ಪೂರ್ಣಗೊಳಿಸಿ 1928ರಲ್ಲಿ ಭಾರತಕ್ಕೆ ಹಿಂದಿರುಗಿದರು.
ಪಾವಟೆ ಅವರು ಬನಾರಸ್ ಹಿಂದು ವಿಶ್ವವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ 1928-30 ಅವಧಿಯಲ್ಲಿ ಸೇವೆ ಸಲ್ಲಿಸಿ 1930ರಲ್ಲಿ ಮುಂಬೈ ವಿದ್ಯಾ ಇಲಾಖೆ ಸೇರಿ ಶಿಕ್ಷಣ ಖಾತೆಯ ಹಲವಾರು ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ 1947ರಲ್ಲಿ ಇಲಾಖೆಯ ನಿರ್ದೇಶಕರಾದರು. ಈ ಅವಧಿಯಲ್ಲಿ ಅವರು ಮುಂಬೈ ಪ್ರಾಂತ್ಯದ ಶಿಕ್ಷಣ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು.
ನಿವೃತ್ತಿಯ ನಂತರ ಪಾವಟೆಯವರು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕಗೊಂಡರು. ಕುಲಪತಿಗಳಾಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿಯ ವಿಶ್ವವಿದ್ಯಾಲಯವನ್ನಾಗಿಸಬೇಕೆಂಬುದನ್ನು ಬಿಟ್ಟು ಬೇರೇನನ್ನೂ ಯೋಚಿಸದೆ ಸದಾ ವಿಶ್ವವಿದ್ಯಾಲಯದ ಉನ್ನತಿಗಾಗಿ ದುಡಿದರು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ದೊರೆಯಬೇಕು, ಕನ್ನಡನಾಡಿನ ವಿದ್ಯಾರ್ಥಿಗಳು ಆದರ್ಶ ವಿದ್ಯಾರ್ಥಿಗಳಾಗಬೇಕು, ವಿಶ್ವವಿದ್ಯಾಲಯದ ಹೆಸರು ಹೇಳುವಂತಾಗಬೇಕು, ಕನ್ನಡನಾಡಿಗೆ ಕೀರ್ತಿ ತರಬೇಕು ಎಂಬ ಆಶಯಗಳನ್ನು ಹೊಂದಿದ್ದಷ್ಟೇ ಅಲ್ಲದೆ ವಿಶ್ವವಿದ್ಯಾಲಯದಲ್ಲಿ ನೆಲೆಸುವ ಪ್ರಾಧ್ಯಾಪಕರು, ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ನೆಮ್ಮದಿಯ ಜೀವನ ನಡೆಸಬೇಕೆಂಬ ಸಹೃದಯತೆಯಿಂದ ಅವರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿದರು.
ಹಲವಾರು ಮಂದಿ ಶಿಕ್ಷಣವೇತ್ತರ ಅಹರ್ನಿಶಿ ದುಡಿತದ ಫಲವಾಗಿ ರೂಪುಗೊಂಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆರ್.ಎ. ಜಾಗೀರದಾರ, ಹುಲಕೋಟಿ ಇವರ ನಂತರ ಕುಲಪತಿಗಳಾಗಿ ಆಯ್ಕೆಯಾಗಿ 1954ರ ವರ್ಷದಲ್ಲಿ ಬಂದ ಡಿ.ಸಿ. ಪಾವಟೆ ಅವರು ಒಟ್ಟು 14 ವರ್ಷಗಳ ಕಾಲ ಆಡಳಿತ ನಡೆಸಿ 350 ಎಕರೆ ವಿಸ್ತೀರ್ಣದ ಛೋಟಮಹಾಬಳೇಶ್ವರ ಗುಡ್ಡದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯವು ಕಂಗೊಳಿಸುವಂತೆ ಮಾಡಿದರು.
ಎಲ್ಲಾ ವಿಭಾಗದ ಕಟ್ಟಡದ ನಿರ್ಮಾಣದ ಜೊತೆಗೆ ಆಯಾಯ ವಿಭಾಗಗಳಿಗೆ ಸಮರ್ಥರಾದ ವಿದ್ವಾಂಸರನ್ನೂ ಆಯ್ಕೆ ಮಾಡಿಕೊಂಡರು. ಗ್ರಂಥ ಭಂಡಾರವನ್ನೂ ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಿದರು. ಶೈಕ್ಷಣಿಕವಾಗಿ ಸುಧಾರಣೆ ತರಲು ಯುರೋಪ್, ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳನ್ನೂ ಸಂದರ್ಶಿಸಿದರು. ಜಿನೀವಾದಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಭಾರತೀಯ ನಿಯೋಗದ ನಾಯಕರಾಗಿದ್ದರು.
1955-56ರಲ್ಲಿ ಅಧಿಕೃತ ಭಾಷಾ ಸಮಿತಿಯ ಸದಸ್ಯರಾಗಿ, ಭಾರತ ಸರಕಾರದ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು.
ಡಿ. ಸಿ. ಪಾವಟೆಯವರ ಸರ್ವತೋಮುಖ ಸೇವೆಗೆ ಭಾರತ ಸರ್ಕಾರವು 1966ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 1967ರಲ್ಲಿ ಅವರನ್ನು ಪಂಜಾಬಿನ ರಾಜ್ಯಪಾಲರನ್ನಾಗಿ ನೇಮಿಸಿದಾಗ 5 ವರ್ಷಗಳ ಕಾಲ ಪಂಜಾಬ್ ರಾಜ್ಯದ ಅಭ್ಯುದಯಕ್ಕಾಗಿ ದುಡಿದರು.
ಡಿ.ಸಿ. ಪಾವಟೆ ಅವರು 'ಎಲಿಮೆಂಟ್ಸ್ ಆಫ್ ಕ್ಯಾಲುಕುಲಸ್' ಎಂಬ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥವನ್ನು ರಚಿಸಿದ್ದಾರೆ. ಇದಲ್ಲದೆ ‘ಮೆಮೋರಿಸ್ ಆಫ್ ಎನ್ ಎಜುಕೇಷನಲ್ ಅಡ್ಮಿನಿಸ್ಟ್ರೇಟರ್' ಹಾಗೂ 'ಮೈ ಡೇಸ್ ಅಸ್ ಗೌವರ್ನರ್' ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ. ಈ ಎರಡು ಗ್ರಂಥಗಳು ಕೇವಲ ಆತ್ಮಚರಿತ್ರೆಯಾಗಿಲ್ಲದೆ ಸ್ವಾತಂತ್ರ್ಯಾ ನಂತರದ ಭಾರತೀಯ ರಾಜಕೀಯ ಮತ್ತು ಶೈಕ್ಷಣಿಕ ವಿಷಯಗಳ ಮೇಲೆ ಬೆಳಕು ಚೆಲ್ಲುವಂತದ್ದೆನಿಸಿವೆ.
ದೀರ್ಘಾವಧಿ ಸಾರ್ವಜನಿಕ ಸೇವೆಯ ನಂತರ ಬೆಂಗಳೂರಿನಲ್ಲಿ ನೆಲೆಗೊಂಡು ಸಂತೃಪ್ತ ಜೀವನ ನಡೆಸಿದ ಡಿ. ಸಿ. ಪಾವಟೆಯವರು 1979ರ ಜನವರಿ 17ರಂದು ಬದುಕಿಗೆ ವಿದಾಯ ಹೇಳಿದರು. ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿದ ಮಹತ್ತರ ಕೊಡುಗೆಯ ನೆನಪಿಗಾಗಿ ಇವರ ಕುಟುಂಬವರ್ಗದವರು, ಇವರ ಹುಟ್ಟೂರಾದ ಮಮದಾಪುರದಲ್ಲಿ ಇವರ ತಂದೆ ಚಿಂತಪ್ಪ ಪಾವಟೆಯವರ ಹೆಸರಿನಲ್ಲಿ ಮಾಧ್ಯಮಿಕ ಶಾಲೆಯನ್ನು ಪ್ರಾರಂಭಿಸಿ, ಇವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.
Kshetra Samachara
20/01/2022 01:51 pm