ಧಾರವಾಡ: 2021ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ತಿರಸ್ಕರಿಸಿರುವ ಮತ್ತು ಪಿಯುಸಿ ಪರೀಕ್ಷೆಗೆ ಹಾಜರಾಗಲು ಬಯಸಿರುವ ಖಾಸಗಿ ಅಭ್ಯರ್ಥಿಗಳಿಗೆ ರಾಜ್ಯದಾದ್ಯಂತ ಏಕಕಾಲದಲ್ಲಿ ಆಗಸ್ಟ್ 19ರಿಂದ ಸೆಪ್ಟೆಂಬರ್ 3ವರೆಗೆ ಪ್ರತಿದಿನ ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ಮತ್ತು ಮಧ್ಯಾಹ್ನ 2:15 ರಿಂದ ಸಂಜೆ 5:30 ರವರೆಗೆ ಪರೀಕ್ಷೆಗಳು ನಡೆಯುತ್ತವೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 05 ಪರೀಕ್ಷಾ ಕೇಂದ್ರಗಳಿದ್ದು, ಧಾರವಾಡ, ಹುಬ್ಬಳ್ಳಿ, ನವಲಗುಂದ, ಕುಂದಗೋಳ, ಕಲಘಟಗಿಗಳಲ್ಲಿ ತಲಾ ಒಂದೊಂದು ಪರೀಕ್ಷಾ ಕೇಂದ್ರಗಳಿವೆ. ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ನವಲೂರು, ಧಾರವಾಡ, ಸರ್ಕಾರಿ ಪದವಿ ಪೂರ್ವ ಕಾಲೇಜು ಗೋಪನಕೊಪ್ಪ ಹುಬ್ಬಳ್ಳಿ, ಶ್ರೀ ಶಂಕರ ಪದವಿ ಪೂರ್ವ ಕಾಲೇಜು ನವಲಗುಂದ, ಹರಭಟ್ಟ ಪದವಿ ಪೂರ್ವ ಕಾಲೇಜು ಕುಂದಗೋಳ, ಗುಡ್‍ನ್ಯೂಸ್ ಪದವಿ ಪೂರ್ವ ಕಾಲೇಜು ಕಲಘಟಗಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಿಂದ ಪಿಯುಸಿ ಪರೀಕ್ಷೆಗೆ 23 ಜನ ಫಲಿತಾಂಶ ತಿರಸ್ಕರಿಸುವ ವಿದ್ಯಾರ್ಥಿಗಳು ಹಾಗೂ 506 ಜನ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 529 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
17/08/2021 07:44 pm