ಹುಬ್ಬಳ್ಳಿ : ಇಲ್ಲಿಯ ಮೂರು ಸಾವಿರ ಮಠಕ್ಕೆ ಸೇರಿದ ಕೋಟ್ಯಂತರ ರೂ ಬೆಲೆ ಬಾಳುವ 25 ಎಕರೆ ಜಮೀನನ್ನು ಬೆಳಗಾವಿಯ ಕೆಎಲ್ಇ ಸಂಸ್ಥೆಗೆ ದಾನ ನೀಡಿರುವುದಕ್ಕೆ ದಿನೆ ದಿನೆ ತೀವ್ರ ವಿರೋಧ ವ್ಯಕ್ತವಾಗ ತೊಡಗಿದೆ.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಈಗ ಆಖಾಡಕ್ಕೆ ಇಳಿದಿರುವುದರಿಂದ ವಿರೋಧ ಇನ್ನೂ ತೀವ್ರವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಕೆಎಲ್ಇ ಸಂಸ್ಥೆಯಿಂದ ಈಡೇರಿಸಲು ಸಾಧ್ಯವಾಗದ ಬೇಡಿಕೆಗಳನ್ನು ಒಕ್ಕೂಟವು ಮುಂದಿಟ್ಟಿರುವುದು ಈ ಎಲ್ಲ ಬೆಳವಣಿಗೆಗೆ ನಾಂದಿಯಾಗಿದೆ.
ತಮ್ಮ ಬೇಡಿಕೆಗಳು ಈಡೇರಿಸುವ ಬಗ್ಗೆ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಮುಚ್ಚಳಿಕೆ ಬರೆದು ಕೊಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಒಕ್ಕೂಟದ ಅಧ್ಯಕ್ಷ ಡಾ ಶರಣಪ್ಪ ಕೋಟಗಿ ಪದಾಧಿಕಾರಿಗಳಾದ ಬಂಗಾರೇಶ್ ಹಿರೇಮಠ್ ರಾಜಶೇಖರ್ ಮೆಣಸಿನಕಾಯಿ ಸುರೇಶ್ ಸವಣೂರ್ ಪ್ರಕಾಶ್ ಗೌಡ ಪಾಟೀಲ್ ಡಾ ಶಿವಯೋಗಿ ತೆಂಗಿನಕಾಯಿ ಎಂ ಪಿ ಶಿವಕುಮಾರ್ ಶ್ರೀಮತಿ ಶೈಲಜಾ ಹಿರೇಮಠ ರಾಜಶೇಖರ್ ಕಲ್ಯಾಣ ಶೆಟ್ಟರ್ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.
ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಶ್ರೀಮಠದ ಸುಮಾರು 24 .23 ಗುಂಟೆ ಎಕರೆ ಭೂಮಿಯನ್ನು ಮೆಡಿಕಲ್ ಕಾಲೇಜ್ ನಿರ್ಮಿಸಲು ಕೆಎಲ್ಇ ಸಂಸ್ಥೆಗೆ ದಾನವಾಗಿ ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟವು ಅವಲೋಕಿಸಿದಾಗ ನೂರಾರು ವರ್ಷದ ಹಿಂದೆ ಸಮಾಜದ ಹಿರಿಯರು ತಮ್ಮ ನೂರಾರು ಎಕರೆ ಭೂಮಿಯನ್ನು ಈ ಸಂಸ್ಥೆಗೆ ದಾನವಾಗಿ ನೀಡಿ ಕಟ್ಟಿ ಬೆಳೆಸಿದ ಪ್ರಯುಕ್ತ ಈಗ ರಾಷ್ಟ್ರಮಟ್ಟದಲ್ಲಿ ಬೆಳೆದಿದ್ದು ಅಂದಿನ ದಿನಮಾನಗಳಲ್ಲಿ ಇಷ್ಟೊಂದು ಪೈಪೋಟಿ ಹಾಗೂ ಮೆಡಿಕಲ್ ಸೀಟಿಗಾಗಿ ದೊಡ್ಡ ಮಟ್ಟದ ಡೊನೇಶನ್ ಹಾವಳಿ ಇರಲಿಲ್ಲ.
ಹೀಗಾಗಿ ಲಿಂಗಾಯತ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೀಟನ್ನು ಪಡೆಯಲು ತುಂಬಾ ತೊಂದರೆ ಅನುಭವಿಸುತಿದ್ದಾರೆ. ಆದಕಾರಣ ಒಕ್ಕೂಟವು ಕೆಲ ಶರತ್ತುಬದ್ಧ ನಿರ್ಣಯಗಳನ್ನು ನೀಡಿದ್ದು ಅದನ್ನು ಚಾಚೂ ತಪ್ಪದೆ ಪಾಲಿಸುವಂತೆ ಹಾಗೂ ಈ ನಿರ್ಣಯಗಳನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಶ್ರೀಮಠಕ್ಕೆ ಮುಚ್ಚಳಿಕೆ ಪತ್ರವನ್ನು ಬರೆದು ಕೊಡಬೇಕೆಂದು ಆಗ್ರಹಿಸಿದ್ದಾರೆ
ನಿರ್ಣಯಗಳು
1) ಉದ್ದೇಶಿತ ಮೆಡಿಕಲ್ ಕಾಲೇಜಿಗೆ ಕನಿಷ್ಠ 150 ಸೀಟುಗಳು ಲಭಿಸಲಿದ್ದು ಅದರಲ್ಲಿ 25 % ಸೀಟುಗಳನ್ನು ಶ್ರೀಮಠಕ್ಕೆ ಉಚಿತವಾಗಿ ನೀಡಬೇಕು.
2) ಕಾಲೇಜಿನಲ್ಲಿ ಉದ್ಯೋಗ ಕಲ್ಪಿಸುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಹಾಗೂ ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ಉದ್ಯೋಗ ಕಲ್ಪಿಸಬೇಕು.
3) ಮೆಡಿಕಲ್ ಸೀಟ್ ಹಂಚುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯಕ್ಕೆ 25% ರಿಯಾಯಿತಿ ರೂಪದಲ್ಲಿ ನೀಡಬೇಕು.
4) ವೀರಶೈವ ಲಿಂಗಾಯತ ಎಲ್ಲಾ ಒಳ ಪಂಗಡಗಳ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸ ಬೇಕು ಹಾಗೂ ಸಮಾಜದ ಇತರರಿಗೂ ರಿಯಾಯಿತಿ ಒದಗಿಸ ಬೇಕು.
5)ಈ ಒಡಂಬಡಿಕೆಯ ಪತ್ರದ ಅನುಸಾರವಾಗಿ ಜಿಲ್ಲೆಯ ಎಲ್ಲಾ ಒಳಪಂಗಡಗಳ ಸಮಾಜದವರ ಹಿರಿಯರು ಒಳಗೊಂಡ ಸಮಿತಿ ರಚಿಸಬೇಕು.
6) ಇದೆಲ್ಲದರ ಮೇಲೆ ಹಿರಿಯ ಜನಪ್ರತಿನಿಧಿಗಳ ಕೋರ್ ಕಮಿಟಿ ತಂಡವನ್ನು ರಚಿಸಬೇಕು ಅದರಲ್ಲಿ ಎರಡನೇ ಹಂತದ ಯುವ ನಾಯಕರನ್ನು ಸಮಿತಿಯಲ್ಲಿ ತೊಡಗಿಸಿಕೊಳ್ಳುವದು ಸೇರಿದಂತೆ ಮುಂತಾದ ವಿಷಯಗಳ ಕುರಿತು ಸೂಕ್ತ ನಿರ್ಣಯಕ್ಕೆ ಬದ್ದರಾಗುವಂತೆ ಸಂಸ್ಥೆಯ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ತಿಳಿಸಲಾಗಿದೆ.
ಈ ಕುರಿತು ಮೇಲೆ ಕಾಣಿಸಿದ ವಿಷಯಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ತಿಳಿಸಿದೆ.
Kshetra Samachara
27/12/2020 08:47 pm