ಹುಬ್ಬಳ್ಳಿ: ಅಧುನಿಕ ಯುಗದ ಯುದ್ಧದ ಸವಾಲುಗಳು ಅತೀ ವಿಭಿನ್ನವಾಗಿದ್ದು,ಸೇನೆ ಸೇರ ಬಯಸುವ ಯುವ ಜನತೆ ದೇಶ ಪ್ರೇಮದ ಜೊತೆಗೆ ತಂತ್ರಜ್ಞಾನ ಆಧಾರಿತ ನೈಪುಣ್ಯತೆಯನ್ನು ರೂಢಿಸಿಕೊಳ್ಳಬೇಕೆಂದು ಲೆಫ್ಟಿನೆಂಟ್ ಜನರಲ್ ಎಸ್. ಸಿ.ಸರದೇಶಪಾಂಡೆ ಕರೆ ನೀಡಿದರು.
ಹುಬ್ಬಳ್ಳಿಯ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗು ಅಕ್ಷಯ್ ಗಿರೀಶ್ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಬಯೋ ಟೆಕ್ನಾಲಜಿ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡಿದ ಅವರು, ಕಾರ್ಗಿಲ್ ಯುದ್ದದಲ್ಲಿನ ಭಾರತೀಯ ಸೇನೆಯ ಯೋಧರ ಶೌರ್ಯ, ನಿಸ್ವಾರ್ಥತೆ ಹಾಗೂ ಶ್ರದ್ಧೆಯನ್ನು ಸ್ಮರಿಸಿದರು.
ಹುತಾತ್ಮ ಮೇಜರ್ ಪದ್ಮಪಾಣೆ ಆಚಾರ್ಯ ಅವರು ಟೊಲೊಲಿಂಗ್ ಪರ್ವತವನ್ನು ಮರುವಶ ಮಾಡಿದ ಸಾಹಸಗಾಥೆಯನ್ನು ವಿವರಿಸಲಾಯಿತು. ಗ್ರೂಪ್ ಕ್ಯಾಪ್ಟನ್ ಅಶ್ವಿನಿಕುಮಾರ್ ಮಂಡೋಹೋತ ಮಾತನಾಡಿ ಕಾರ್ಗಿಲ್ ಯುದ್ಧದ ಆಪರೇಶನ್ ಸಫೇದ್ ಸಾಗರ್ ಬಗ್ಗೆ ತಮ್ಮ ಮೈನವಿರೇಳಿಸುವ ಅನುಭವಗಳನ್ನು ಹಂಚಿಕೊಂಡರು.
ಕಾರ್ಗಿಲ್ ಯುದ್ದದಲ್ಲಿ ವಾಯುಪಡೆಗಳ ಮಹತ್ವ ಹಾಗೂ ನಿಭಾಯಿಸಿದ ಭೂಮಿಕೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ವಿಂಗ್ ಕಮಾಂಡರ್ ಗಿರೀಶ್ ಕುಮಾರ್ ವಾಯುಸೇನೆಯಲ್ಲಿ ತಮ್ಮ ಅನುಭವಗಳನ್ನು ವಿವರಿಸಿದರು. ಕಾರ್ಗಿಲ್ ಯುದ್ಧದ ಟೊಲೊಲಿಂಗ್ ಕದನದ ಕ್ಲಿಷ್ಟಕರ ಸನ್ನಿವೇಶಗಳನ್ನು ಹಾಗು ಭಾರತೀಯ ಸೇನೆ ಅವುಗಳನ್ನು ಮೆಟ್ಟಿ ನಿಂತ ಬಗೆಯನ್ನು ಮೇಘನಾ ಗಿರೀಶ್ ಸವಿಸ್ತಾರವಾಗಿ ನಿರೂಪಿಸಿದರು.
ಇನ್ನೂ ಮೇಜರ್ ಜನರಲ್ ಇಯಾನ್ ಕಾರ್ಡೋಜೊ ಕಾರ್ಗಿಲ್ ಯುದ್ದ ಕುರಿತು ರಚಿಸಿದ ಕವನವನ್ನು ಪ್ರಸ್ತುತಪಡಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆ.ಎಲ್.ಇ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅಶೋಕ ಶೆಟ್ಟರ್ ಮಾತನಾಡಿ ಭವಿಷ್ದ ದಿನಗಳಲ್ಲಿ ರಕ್ಷಣಾ ವಲಯದಲ್ಲಿ ವಿಜ್ಞಾನ ,ತಂತ್ರಜ್ಞಾನ ಮತ್ತು ನವೋದ್ಯಮಗಳು ವಹಿಸಬಹುದಾದ ಪಾತ್ರ ಹಾಗು ತಂತ್ರಜ್ಞಾನ ಆಧಾರಿತ ಆರ್ಥಿಕತೆಯ ಬಗ್ಗೆ ಬೆಳಕು ಚೆಲ್ಲಿದರು.
ಇದೇ ಸಂದರ್ಭದಲ್ಲಿ ಕಾರ್ಗಿಲ್ ವೀರ ಸೇನಾನಿಗಳಾದ ಹುತಾತ್ಮ ಮೇಜರ್ ಪದ್ಮಪಾಣೆ ಆಚಾರ್ಯರ ಪತ್ನಿ ಚಾರುಲತಾ ಆಚಾರ್ಯ, ಸುಬೇದಾರ್ ವೀರಪ್ಪ ಬಿಂಗಿ, ಗ್ರುಪ್ ಕ್ಯಾಪ್ಟನ್ ಆಶ್ವಿನಿಕುಮಾರ ಮಂಡೋಹೋತ ಹಾಗು ಲೆಫ್ಟಿನೆಂಟ್ ಕರ್ನಲ್ ಪಿ.ಎಸ್.ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಎಸ್.ಎಸ್.ಕಣಬರಗಿಮಠ, ಕೆ.ಎಲ್.ಇ. ವಿಶ್ವವಿದ್ಯಾಲಯದ ಡೀನ್ ಗಳಾದ ಡಾ.ಪ್ರಕಾಶ್ ತೇವರಿ, ಪ್ರೊ.ಬಿ.ಎಲ್.ದೇಸಾಯಿ, ಡಾ.ಸಂಜಯ ಕೊಟಬಾಗಿ, ಪ್ರೊ.ಶಿವರಾಜ್ ಹುಬಳೀಕರ್ ಮುಂತಾದವರು ಉಪಸ್ಥಿತರಿದ್ದರು.
Kshetra Samachara
26/07/2022 08:11 pm