ಧಾರವಾಡ: ಧಾರವಾಡದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಯಿತು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಪೊಲೀಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ಈ ಕಾರ್ಯಕ್ರಮದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ. ಆದರೆ, ವಿವಿಧ ಪೊಲೀಸ್ ಪಡೆಗಳು ಶಿಸ್ತುಬದ್ಧ ಪಥಸಂಚಲನ ನಡೆಸಿ ಗಮನಸೆಳೆದರು.
ಶಾಸಕರಾದ ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಲಾಬುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಸೇರಿದಂತೆ ಜಿಲ್ಲಾಡಳಿತದ ಎಲ್ಲ ಹಂತದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಏಕೀಕರಣದ ಚಳವಳಿಯು ಇದೇ ನಮ್ಮ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಅಭಿಮಾನದ ವಿಷಯವಾಗಿದೆ.
ಇಲ್ಲಿನ ನರೇಂದ್ರ ಗ್ರಾಮದ ರಾ.ಹ.ದೇಶಪಾಂಡೆಯವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಓದುವಾಗ ಭಾಷೆಯ ಕಾರಣಗಳಿಂದ ಅನೇಕ ಬಾರಿ ನೊಂದಿದ್ದರು. 1887 ರಿಂದಲೇ ಕನ್ನಡ ಭಾಷೆಯ ದೀನ ಸ್ಥಿತಿಯನ್ನು ದೂರ ಮಾಡುವುದಕ್ಕಾಗಿ ಕನ್ನಡ ಜನರ ಸಹಾಯದಿಂದ ಒಂದು ಸಂಘ ಸ್ಥಾಪಿಸಲು ಅವರು ಪ್ರಯತ್ನಿಸುತ್ತಿದ್ದರು. ಅವರ ಪ್ರಯತ್ನದ ಫಲವಾಗಿ ಜುಲೈ 20, 1890 ರಲ್ಲಿ ಧಾರವಾಡದಲ್ಲಿ ಸಮಾನ ಮನಸ್ಕರ ಸಹಕಾರದೊಂದಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಕನ್ನಡಿಗರನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಒಂದುಗೂಡಿಸಲು ಧಾರವಾಡದಲ್ಲಿ ನಡೆದ ಚಳುವಳಿ, ಹೋರಾಟಗಳು ಇಡೀ ರಾಜ್ಯಕ್ಕೆ ದಿಕ್ಸೂಚಿಯಾಗಿದ್ದವು. ಡೆಪ್ಯುಟಿ ಚನ್ನಬಸಪ್ಪನವರು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿರುವುದನ್ನು ನಾವೆಲ್ಲ ಸದಾಕಾಲ ನೆನೆಯಬೇಕು ಎಂದರು.
Kshetra Samachara
01/11/2021 10:32 am