ಹುಬ್ಬಳ್ಳಿ: ಸರಳ ವಾಸ್ತುತಜ್ಞ ಶ್ರೀ ಚಂದ್ರಶೇಖರ ಗುರೂಜಿ ಹತ್ಯೆ ಬಗೆಗಿನ ಆಂತರಿಕ ವಿಚಾರಗಳನ್ನು ಬಯಲು ಮಾಡಲು ತಾಂತ್ರಿಕ ತಜ್ಞರನ್ನೊಳಗೊಂಡ ಪ್ರತ್ಯೇಕ ತಂಡವನ್ನು ಪೊಲೀಸ್ ಕಮಿಷನರೇಟ್ ರಚಿಸಿದೆ. ಈ ನಡುವೆ ಕೊಲೆ ಆರೋಪಿಗಳ ಆಪ್ತರ ವಿಚಾರಣೆಯನ್ನೂ ಪೊಲೀಸರು ನಡೆಸುತ್ತಿದ್ದು, ಈ ಮೂಲಕ ತನಿಖೆ ಮತ್ತಷ್ಟು ತೀವ್ರಗೊಂಡಿದೆ.
ಗುರೂಜಿ ಹತ್ಯೆ ಹಿಂದಿನ ರಹಸ್ಯ ಛೇದಿಸಲು ಪೊಲೀಸ್ ಆಯುಕ್ತರ ಕಚೇರಿ ಹರಸಾಹಸ ಪಡುತ್ತಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಖುದ್ದು ಆರೋಪಿಗಳ ವಿಚಾರಣೆ ನಡೆಸಿದರೂ ಅಷ್ಟೊಂದು ಫಲ ನೀಡಿದಂತಿಲ್ಲ. ಬರೀ ಆಸ್ತಿ, ನೌಕರಿಯಲ್ಲಿದ್ದಾಗ ಕಿರುಕುಳ ಎಂಬ ಮಾಹಿತಿಯಷ್ಟೇ ದೊರೆಯುತ್ತಿದೆ.
ಈ ಹಿನ್ನೆಲೆಯಲ್ಲಿ ತಾಂತ್ರಿಕ ತಜ್ಞರ ಪ್ರತ್ಯೇಕ ತಂಡ ರಚಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿನ ನಾನಾ ಠಾಣೆಯ ನುರಿತ ಸಿಬ್ಬಂದಿ ತಂಡದಲ್ಲಿದ್ದಾರೆ. ಸ್ವತಃ ಕಮಿಷನರ್ ಮೇಲ್ವಿಚಾರಣೆ ವಹಿಸಿದ್ದಾರೆ. ಈಗಾಗಲೇ ಈ ತಂಡ ಚುರುಕಿನಿಂದ ಕಾರ್ಯಾಚರಣೆ ನಡೆಸಿದ್ದು, ಗುರೂಜಿ ಕೊಲೆ ಹಿಂದಿನ 8ರಿಂದ 10 ದಿನಗಳವಧಿಯಲ್ಲಿ ಆರೋಪಿಗಳ ಚಲನವಲನ, ಯಾರ ಜತೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಕಲೆ ಹಾಕುತ್ತಿದೆ.
ಕೊಲೆಗೆ ಈಗ ಆರೋಪಿಗಳು ಹೇಳಿರುವುದಷ್ಟೇ ಕಾರಣವೇ ಅಥವಾ ಹತ್ಯೆಗೆ ಬೇರೆಯವರೇನಾದರೂ ಕುಮ್ಮಕ್ಕು ನೀಡಿದ್ದಾರೆಯೇ ? ಎಂಬ ಬಗ್ಗೆ ಅರಿಯುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೊಲೆ ನಡೆದ ಹೋಟೆಲ್ ಹಾಗೂ ಆರೋಪಿಗಳು ಓಡಾಡಿದ ಸ್ಥಳಗಳಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಲಭ್ಯತೆ ಕಾರ್ಯ ಚುರುಕಿನಿಂದ ನಡೆದಿದೆ. ಇದಕ್ಕಾಗಿ ನಾಲ್ಕೈದು ಮಂದಿ ನುರಿತ ಪೊಲೀಸರ ಪ್ರತ್ಯೇಕ ತಂಡ ಕಾರ್ಯಾಚರಿಸುತ್ತಿದೆ.
ಇನ್ನು, ಮೊಬೈಲ್ ಟವರ್ ಲೊಕೇಶನ್ ಹಾಗೂ ಯಾರಾರು ಮೊಬೈಲ್ ಗೆ ಕರೆ ಮಾಡಿದ್ದಾರೆ ಎಂಬ ಶೋಧಕ್ಕೆ ತಂಡ ಇಳಿದಿದೆ. ಇದರೊಟ್ಟಿಗೆ ಇಬ್ಬರು ಆರೋಪಿಗಳ ನಿಕಟ ಸಂಪರ್ಕದಲ್ಲಿರುವ ವ್ಯಕ್ತಿಗಳ ಪತ್ತೆ ಕಾರ್ಯವೂ ನಡೆದಿದೆ. ಈಗಾಗಲೇ ಹಲವರನ್ನು ಪತ್ತೆ ಹಚ್ಚಿರುವ ಪೊಲೀಸರು, ಅವರ ಮೇಲೆ ವಿಶೇಷ ನಿಗಾ ವಹಿಸಿದೆ. ಅವಶ್ಯ ಬಿದ್ದರೆ ಅವರನ್ನು ಸಹ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯೂ ದಟ್ಟವಾಗಿದೆ.
ಎಷ್ಟೇ ವಿಚಾರಣೆ ನಡೆಸಿದ್ರೂ ಹಂತಕರು ಮಾತ್ರ ಅದೇ ರಾಗ ಅದೇ ಹಾಡು ಹಾಡುತ್ತಿದ್ದಾರೆ. ಆರೋಪಿಗಳ ಅಂತರಾಳದಲ್ಲಿ ಅಡಗಿರುವ ಸತ್ಯ ಮಾತ್ರ ಹೊರಬರುತ್ತಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಕೊನೆದಾಗಿ ಈ ಹೊಸ ಅಸ್ತ್ರ ಬಳಸಿದೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತೆ ಎಂಬುದಕ್ಕೆ ಇನ್ನೂ ಒಂದು ದಿನ ಕಾಯಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/07/2022 08:14 pm