ಹುಬ್ಬಳ್ಳಿ: ರಾಜ್ಯ ಸರ್ಕಾರದ ವ್ಯಾಪ್ತಿಯ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಅಕ್ರಮ ನೇಮಕಾತಿಯ ಹಗರಣ ಹೊರಬರುತ್ತಿರುವ ಬೆನ್ನಲ್ಲೆ, ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲೇ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನಕಲಿ ನೋಟಿಫಿಕೇಶನ್ ಹೊರಡಿಸಿರುವುದು ಬೆಳಕಿಗೆ ಬಂದಿದೆ. ಇದರ ವಿರುದ್ಧ ದೂರು ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.
ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಮೋಸ ಮಾಡುವ ರಾಕೇಟ್‌ಗಳಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇಂತಹವರಿಂದ ಹುಷಾರಾಗಿರಿ ಎಂದು ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜಾಗೃತಿಯನ್ನುಂಟು ಮಾಡುವ ಕೆಲಸವನ್ನು ರೈಲ್ವೆ ಇಲಾಖೆ ಮಾಡುತ್ತಿದೆ.
ನೈಋತ್ಯ ರೈಲ್ವೆ ವಲಯದ ಜಿಎಂ ವ್ಯಾಪ್ತಿಯಲ್ಲಿ (ಮಹಾಪ್ರಬಂಧಕರು) ಕೋಟಾದಡಿ ಇಂತಿಷ್ಟು ಟೆಕ್ನಿಕಲ್ ಹಾಗೂ ನಾನ್ ಟೆಕ್ನಿಕಲ್ 2800 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಮಾಡಬಾರದು ಎಂದು ಖಚಿತ ಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಈ ರೀತಿಯ ಹಲವಾರು ನಿಯಮಗಳನ್ನ ಸೇರಿದಂತೆ ವಿವಿಧ ಸೂಚನೆಗಳುಳ್ಳ ಪತ್ರ ಇದೀಗ ಎಲ್ಲೆಡೆ ಹರಿದಾಡುತ್ತಿವೆ. ಸಾರ್ವಜನಿಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬಾರದೆಂದು ಇಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಹರಿದಾಡುತ್ತಿರುವ ಪತ್ರದಿಂದ ಉದ್ಭವವಾಗುತ್ತದೆ.
ಹೀಗೆ ಜಿಎಂ ಕೋಟಾದಡಿ ಹೊರಡಿಸಿರುವ ನೋಟಿಫಿಕೇಶನ್ ಜಿಎಂ ಸಹಿ ಹಾಗೂ ಸೀಲುಗಳನ್ನ ಸಹ ನಕಲು ಮಾಡಲಾಗಿದೆ. ಈ ಪತ್ರ ನೋಡಿದರೆ ಯಾರೂ ಸಹ ಇದು ನಕಲಿ ಎಂದು ಹೇಳಲು ಸಾಧ್ಯವಿಲ್ಲ.ಆದರೆ ಈ ರೀತಿ ಪತ್ರ, ನೋಟಿಫಿಕೇಶನ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿರುದ್ಯೋಗಿಗಳನ್ನು ನಂಬಿಸಿ ದುಡ್ಡು ವಸೂಲಿ ಮಾಡುವ ಜಾಲ ಇದರ ಹಿಂದೆ ಇದೆ. ಹೀಗಾಗಿ ಇದನ್ನು ಯಾರು ನಂಬಬಾರದು ಎಂದು ರೈಲ್ವೆ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/05/2022 10:38 am