ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಅಪರಾಧಿಗಳಿಗೆ ಹುಬ್ಬಳ್ಳಿಯ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯ ವ್ಯಾಪ್ತಿಯ ಪಠಾಣಗಲ್ಲಿಯ ಸರ್ಕಲ್ ಬಳಿ ಶಾಬುದ್ದಿನ ಎಂಬಾತನನ್ನು ಶಮಶುದ್ದಿನ ಸವಣೂರು, ಜುಬೇರ್ ಅಹ್ಮದ್ ಕಲಬುರ್ಗಿ ಎಂಬುವರು ಚಾಕುವಿನಿಂದ ಹೊಟ್ಟೆ, ಬೆನ್ನಿಗೆ ಹಾಗೂ ಪಕ್ಕಡಿ ಭಾಗಕ್ಕೆ ಇರಿದು ಕೊಲೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ: 2020 ಮಾರ್ಚ್ 10ರಂದು ರಾತ್ರಿ 11:45ರ ಸುಮಾರಿಗೆ ಕಟಗರ ಓಣಿಯ ಸರಕಾರಿ ಉರ್ದು ಶಾಲೆಯ ಹತ್ತಿರ ಆರೋಪಿಗಳಾದ ಶಮಶುದ್ದಿನ್ ಸವಣೂರು, ಜುಬೇರ್ ಅಹ್ಮದ್ ಕಲಬುರ್ಗಿ ಮಾತನಾಡುತ್ತಾ ಕುಳಿತ್ತಿದ್ದ ಸಂದರ್ಭದಲ್ಲಿ ಶಾಬುದ್ದಿನ್ ಬಂದು ಗುರಾಯಿಸಿ ನೋಡಿದಕ್ಕೆ ಶಮಸುದ್ದಿನ್ ಸವಣೂರು ಯಾಕೆ ಗುರಾಯಿಸಿವೆ ಎಂದು ಪ್ರಶ್ನೆ ಮಾಡಿದ್ದ. ಇದೇ ಕಾರಣಕ್ಕೆ ಶಾಬುದ್ದಿನ್ ತನ್ನ ಕೈಯಲ್ಲಿದ್ದ ಕಡಗದಿಂದ ಹೊಡೆಯಲು ಹೋದಾಗ ಸ್ಥಳೀಯರು ಜಗಳ ಬಿಡಿಸಿ ಕಳಿಸಿದ್ದ. ಇದೇ ಕಾರಣಕ್ಕೆ ಆರೋಪಿಗಳು ದ್ವೇಷದಿಂದ ಮಾ.11 2020ರಂದು ಪಠಾಣಗಲ್ಲಿಯ ಸರ್ಕಲ್ ನಲ್ಲಿ ಶಾಬುದ್ದಿನ್ ಬರುವುದನ್ನು ಕಾದು ಆತನ ಜೊತೆಗೆ ತಂಟೆ ತೆಗೆದು ಆತನಿಗೆ ಮನಬಂದಂತೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು.
ಈ ಕುರಿತು ಮೃತನ ತಂದೆ ನೀಡಿದ ದೂರಿನ ಅನ್ವಯ ತನಿಖಾಧಿಕಾರಿ ಶ್ಯಾಮರಾವ್ ಸಜ್ಜನ್ ತನಿಖೆ ನಡೆಸಿ, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಈ ಕುರಿತು ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ ಕೆ.ಎನ್ ರವರು 2022ರ ಮಾ.28 ರಂದು ಜೀವಾವಧಿ ಶಿಕ್ಷೆ ಮತ್ತು 1.50,000 ರೂ ದಂಡ, ದಂಡವನ್ನು ಕಟ್ಟದಿದ್ದರೆ ಹೆಚ್ಚುವರಿಯಾಗಿ 2 ವರ್ಷ ಕಾರವಾಸ ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ 1.45.000 ರೂ. ಗಳನ್ನು ಅವಲಂಬಿತರಿಗೆ ಪರಿಹಾರವಾಗಿ ನೀಡಲು ಆದೇಶ ನೀಡಿರುತ್ತಾರೆ. ಸರ್ಕಾರಿ ವಕೀಲ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದ್ದರು.
Kshetra Samachara
29/03/2022 09:00 am