ಹುಬ್ಬಳ್ಳಿ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬುವಂತ ಗಾದೆ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಹುಬ್ಬಳ್ಳಿ ಖ್ಯಾತ ವೈದ್ಯ ದಂಪತಿ ಜಗಳ ಕೊಲೆಗೆ ಸುಪಾರಿ ಕೊಡುವ ಹಂತಕ್ಕೆ ತಲುಪಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೌದು.. ಜೊತೆಗೆ ಸಪ್ತಪದಿ ತುಳಿದ ಪತಿಯೇ ತನ್ನನ್ನ ಕೊಲೆ ಮಾಡಿಸಲು ಸುಪಾರಿ ಕೊಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆಂದು ಪತ್ನಿಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ಘಟನೆ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಾಜಿ ಆಸ್ಪತ್ರೆಯ ಡಾ.ಕ್ರಾಂತಿಕಿರಣ ಅವರ ಪತ್ನಿಯಾದ ಡಾ.ಶೋಭಾ ಸುಣಗಾರ ಎಂಬುವವರೇ ದೂರನ್ನ ನೀಡಿದ್ದು, ತನ್ನ ಪತಿಯ ಜೊತೆ ಮೂರ್ನಾಲ್ಕು ವರ್ಷದಿಂದ ಕೌಟುಂಬಿಕ ಭಿನ್ನಾಭಿಪ್ರಾಯಗಳಿವೆ. ಈ ಕಾರಣಕ್ಕೆ ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಬಿಟ್ಟು ಕೊಡುವಂತೆ ಪೀಡಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತನ್ನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವ ಜೀವ ಬೆದರಿಕೆ ಹಾಕಿದ್ದಲ್ಲದೇ, ಜೋರಾಗಿ ಗೋಡೆಗೆ ದೂಡಿ, ಒಳಪೆಟ್ಟು ಆಗುವಂತೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಬಾಲಾಜಿ ಆಸ್ಪತ್ರೆಯ ಅಕೌಂಟೆಂಟ್ ಮಹೇಶ್ವರಿ ಹೊಸಗೌಡರ ಕೂಡಾ ಜೀವ ಬೆದರಿಕೆ ಹಾಕಿದ್ದಾರೆಂದು ಡಾ.ಶೋಭಾ ಸುಣಗಾರ ದೂರು ನೀಡಿದ್ದಾರೆ. ಇನ್ನೂ ಅಕ್ಟೋಬರ್ 28 ರಂದು ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾನಗರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 1860 (ಯು/ಎಸ್- 323, 341, 506, 34) ಅಡಿ ಮುಂದಿನ ಕ್ರಮವನ್ನು ಜರುಗಿಸಿದ್ದಾರೆ.
ಇನ್ನೂ ಈ ಕುರಿತು ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ ಡಾ.ಕ್ರಾಂತಿಕಿರಣ, ಯಾವುದೇ ಎಫ್ಐಆರ್ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಅಂತಹ ಘಟನೆ ನಡೆದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಪೊಲೀಸ್ ಆಯುಕ್ತರೇ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
Kshetra Samachara
01/11/2021 09:27 pm