ಹುಬ್ಬಳ್ಳಿ : ಕೊರೋನಾ ವೈರಸ್ ಹೆಚ್ಚಳದ ಬಳಿಕ ಹೇರಲಾದ ಲಾಕ್‌ಡೌನ್, ಇದರಿಂದ ಸೃಷ್ಟಿಯಾದ ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ, ಸಂಬಳಕ್ಕೆ ಕತ್ತರಿ.. ಹೀಗೆ ಹಲವು ಸಂಕಷ್ಟಗಳಿಂದಾಗಿ ಹಲವರು ಕಳ್ಳತನದಂಥಾ ದುಷ್ಕೃತ್ಯಗಳಿಗೆ ಇಳಿಯುತ್ತಿದ್ದಾರೆ.
ನಗರದಲ್ಲಿ ಇತ್ತೀಚೆಗೆ ನಡೆದ ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಹಳೆಯ ಅಪರಾಧಿಗಳೊಂದಿಗೆ ಹೊಸಬರು ಭಾಗಿಯಾಗಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಲಾಕ್‌ಡೌನ್ ಎಫೆಕ್ಟ್‌ನಿಂದ ನಗರದಲ್ಲಿ ಸುಲಿಗೆ, ದರೋಡೆ ಮತ್ತು ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಮೊದಲಿನಂತೆ ಹೆಚ್ಚು ಅಪರಾಧ ಕೃತ್ಯಗಳು ದಾಖಲಾಗಿದ್ದು, ಸಾರ್ವಜನಿಕರು ಆತಂಕ್ಕೀಡಾಗುವಂತೆ ಮಾಡಿದೆ.
ಹಳೆಯ ವೃತ್ತಿಪರ ಅಪರಾಧಿಗಳೊಂದಿಗೆ ಹೊಸಬರು ಈ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದು ಪೊಲೀಸರಿಗೆ ಹೊಸ ತಲೆ ನೋವಾಗಿದೆ. ಇದರ ನಡುವೆಯೂ ನಗರ ಪೊಲೀಸರು, ಅಪರಾಧ ಕೃತ್ಯವೆಸಗಿ ತಲೆ ಮರೆಸಿಕೊಂಡಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಆಗಸ್ಟ್‌ನಿಂದ ಸೆಪ್ಟೆಂಬರ್‌ವರೆಗೂ ನಿರಂತರವಾಗಿ ವಾಹನ ಕಳವು, ಸರಗಳ್ಳತನ, ದರೋಡೆ, ಸುಲಿಗೆ, ಮನೆಗಳ್ಳತನದಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯಭೀತರಾಗುವಂತೆ ಮಾಡಿದೆ.ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೂ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಹಳೇ ಕಳ್ಳರು ಹಾಗೂ ದರೋಡೆಕೋರರ ಜೊತೆಗೆ ಹೊಸಬರನ್ನು ಹಿಡಿಯುವುದರ ಸಲುವಾಗಿ ನೈಟ್ ಬಿಟ್ ಹೆಚ್ಚಿಸಲಾಗಿದೆ. ಸಿಸಿಟಿವಿ ಕ್ಯಾಮರಾಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿಸಲಾಗಿದೆ. ಅದರಲ್ಲೂ ಅತೀ ಹೆಚ್ಚು ಕಳ್ಳತನವಾಗುವ ಸೂಕ್ಷ್ಮ ಪ್ರದೇಶಗಳಿಗೆ ಹದ್ದಿನ ಕಣ್ಣು ಇಡಲಾಗಿದೆ.
Kshetra Samachara
24/02/2021 01:51 pm