ಧಾರವಾಡ: ಸೇನಾ ಭರ್ತಿಯಲ್ಲಿ ದೈಹಿಕ ಪರೀಕ್ಷೆ ಪಾಸಾದ ಅಭ್ಯರ್ಥಿಗಳಿಗೆ ಈಗ ಅಗ್ನಿಪಥ ಯೋಜನೆಯಡಿ ಬನ್ನಿ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದರಿಂದ ವಿರೋಧ ವ್ಯಕ್ತಪಡಿಸಿದ ಅಭ್ಯರ್ಥಿಗಳು ಧಾರವಾಡದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಧಾರವಾಡದ ಹಳೆ ಡಿವೈಎಸ್ಪಿ ವೃತ್ತದಲ್ಲಿ ದೈಹಿಕ ಪರೀಕ್ಷೆ ಪಾಸಾದ ಸುಮಾರು 200ಕ್ಕೂ ಅಧಿಕ ಯುವಕರು ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದರು. ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ನಂತರ ಅಭ್ಯರ್ಥಿಗಳಿಗೆ ಪೊಲೀಸರು ಸ್ಥಳದಿಂದ ಹೋಗುವಂತೆ ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಭ್ಯರ್ಥಿಗಳು, ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ ಎಂದು ವಾಗ್ವಾದಕ್ಕಿಳಿದರು. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಪೊಲೀಸರು ಲಾಠಿ ಬೀಸಲಾರಂಭಿಸಿದರು. ಇದರಿಂದ ಅಭ್ಯರ್ಥಿಗಳು ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಪೊಲೀಸರು ಈ ವೇಳೆ ಅನೇಕ ಅಭ್ಯರ್ಥಿಗಳನ್ನು ಹಿಡಿದು ಎಳೆದಾಡಿದ ದೃಶ್ಯಗಳೂ ಕಂಡು ಬಂದವು. ಈ ವೇಳೆ ಪೊಲೀಸರು 20ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದುಕೊಂಡರು.
ಕೆಲ ಅಭ್ಯರ್ಥಿಗಳು ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ಕೂಡ ನಡೆಸಿದರು. ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಪೊಲೀಸ್ ಆಯುಕ್ತ ಲಾಬುರಾಮ್ ಕೂಡ ಭೇಟಿ ನೀಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
Kshetra Samachara
18/06/2022 01:53 pm