ವರದಿ-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಅದು ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ. ಈ ನಗರದಲ್ಲಿ ಕ್ರೈಂ ಪ್ರಕರಣ ಮಾತ್ರ ಕಡಿಮೆಯಾಗುತ್ತಿಲ್ಲ. ಇಲ್ಲಿನ ಜನರು ರಾತ್ರಿ ವೇಳೆ ಸುಖವಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಮಾರಕಾಸ್ತ್ರಗಳ ಸದ್ದಿನಿಂದ ಇಲ್ಲಿ ಶಾಂತಿಯೇ ಇಲ್ಲವಾಗಿದೆ. ಹಾಗಿದ್ದರೇ ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಆಗುತ್ತಿರುವುದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಹಣ, ವ್ಯವಹಾರ ಸೇರಿದಂತೆ ಕ್ಷುಲ್ಲಕ ಕಾರಣಕ್ಕೆ ಇಲ್ಲಿ ಹೆಣಗಳು ಬೀಳುತ್ತಿವೆ. ಅಲ್ಲದೇ ಮಾರಕಾಸ್ತ್ರಗಳು ಸದ್ದು ಮಾಡುತ್ತಿವೆ. ಇದೆಲ್ಲದಕ್ಕೂ ಕಡಿವಾಣ ಹಾಕಲು ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೆ ಪರೇಡ್ ಕೂಡ ಮಾಡಲಾಗುತ್ತಿತ್ತು. ಆದರೂ ಕೂಡ ಕ್ರೈಂಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಮೊದಲು ಬೀಟ್ ವ್ಯವಸ್ಥೆ ಜೋರಾಗಿಯೇ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೊಂಚ ನಿರ್ಲಕ್ಷ್ಯ ವಹಿಸಿದೆಯಾ ಎಂಬುವಂತ ಅನುಮಾನ ಸಾರ್ವಜನಿಕ ವಲಯದಲ್ಲಿ ಮನೆಮಾಡಿದೆ.
ಬೀಟ್ ವ್ಯವಸ್ಥೆಯಿಂದ ಮೊದಲಿಗೆ ಜನರಲ್ಲಿ ಒಂದು ಭರವಸೆ ಇತ್ತು. ಅಲ್ಲದೇ ಯಾವುದೇ ಸಮಸ್ಯೆ ಇದ್ದರೂ ಕೂಡ ತಕ್ಷಣವೇ ಸ್ಪಂದನೆ ಸಿಗುತ್ತದೆ ಹಾಗೂ ಪೊಲೀಸ್ ಸಿಬ್ಬಂದಿ ಇಲ್ಲಿಯೇ ಇರುತ್ತಾರೆ ಎಂದು ಜನರು ಭಾವಿಸಿದ್ದರು ಆದರೆ ಈಗ ಕೊಂಚ ಮಟ್ಟಿಗೆ ಬೀಟ್ ವ್ಯವಸ್ಥೆ ಬಗ್ಗೆ ಪೊಲೀಸ್ ಕಮೀಷನರೇಟ್ ನಿಷ್ಕಾಳಜಿ ತೋರುತ್ತಿದೆಯಾ ಎಂಬುವಂತ ಅನುಮಾನ ಕೇಳಿ ಬರುತ್ತಿದೆ. ಅಲ್ಲದೇ ಒಂದೇ ವಾರದಲ್ಲಿ ಶಹರ ಪೊಲೀಸ್ ಠಾಣೆ ಹಾಗೂ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾಗಿರುವುದು ಜನರಲ್ಲಿ ಆತಂಕ ಹುಟ್ಟು ಹಾಕಿದೆ. ಆದರೆ ಪೊಲೀಸ್ ಆಯುಕ್ತರು ಮಾತ್ರ ಬೀಟ್ ವ್ಯವಸ್ಥೆ ಸರಿಯಾಗಿಯೇ ಇದೆ ಎನ್ನುತ್ತಾರೆ.
ಒಟ್ಟಿನಲ್ಲಿ ಕ್ರೈಂ ಪ್ರಕರಣಗಳಿಗೆ ಕಡಿವಾಣ ಹಾಕುವ ಮೂಲಕ ಸಾಕಷ್ಟು ಹೆಸರು ಮಾಡಿದ ಹು-ಧಾ ಪೊಲೀಸ್ ಕಮೀಷನರೇಟ್ ಬೀಟ್ ವ್ಯವಸ್ಥೆ ಮತ್ತಷ್ಟು ಬಲಪಡಿಸಿ ಸಾರ್ವಜನಿಕರು ನೆಮ್ಮದಿಯ ಉಸಿರು ಬಿಡುವಂತೆ ಮಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/03/2022 05:43 pm