ಹುಬ್ಬಳ್ಳಿ: ತಾರಿಹಾಳದ ಕೈಗಾರಿಕಾ ಘಟಕದಲ್ಲಿ ಬಹುದೊಡ್ಡ ಅವಘಡ ಸಂಭವಿಸಿದ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಧಾರವಾಡ ಜಿಲ್ಲೆಯ ಎಂಟು ಕೈಗಾರಿಕಾ ಪ್ರದೇಶಗಳಲ್ಲಿ ಅನುಮತಿ ಪಡೆಯದೇ 78 ಕಾರ್ಖಾನೆಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಸಿದ್ದಣ್ಣ ನೇತೃತ್ವದಲ್ಲಿ ವಿವಿಧ ಇಲಾಖೆಗಳನ್ನೊಳಗೊಂಡ 10 ಸಮೀಕ್ಷಾ ತಂಡ, ಕಾರ್ಖಾನೆಗಳ ತಪಾಸಣೆ ನಡೆಸಿ ಅಂತಿಮ ವರದಿ ಸಿದ್ಧಪಡಿಸಿದೆ. ಆ ವರದಿಯಲ್ಲಿ ಕಾರ್ಖಾನೆ ಹಾಗೂ ಬಾಯ್ಲರ್ ಇಲಾಖೆಯಿಂದ ಅನುಮತಿ ಪಡೆಯದೇ ಸುಮಾರು ಏಳು–ಎಂಟು ವರ್ಷಗಳಿಂದ 78 ಕಾರ್ಖಾನೆಗಳು ರಾಸಾಯನಿಕ ಬಳಸಿ ಕಾರ್ಯನಿರ್ವಹಿಸುತ್ತಿರುವುದು ಉಲ್ಲೇಖಿಸಲಾಗಿದೆ. ಅವುಗಳಲ್ಲಿ 17 ಕಾರ್ಖಾನೆಗಳ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಕಾನೂನು ನಿಯಮಾವಳಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಮೂರು ಕಾರ್ಖಾನೆಗಳ ಮಾಲೀಕರಿಗೆ, ಕಾರ್ಖಾನೆಗಳನ್ನು ಮುಚ್ಚುವಂತೆ ನೋಟಿಸ್ ನೀಡಿರುವ ಕುರಿತು ವರದಿಯಲ್ಲಿ ತಿಳಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಜುಲೈ 26ರಿಂದ ಆ. 6ರವರೆಗೆ ತಾರಿಹಾಳ, ಗೋಕುಲ ರಸ್ತೆ 1ನೇ ಗೇಟ್, ಗೋಕುಲ ರಸ್ತೆ 2ನೇ ಗೇಟ್, ಗಾಮನಗಟ್ಟಿ, ರಾಯಾಪುರ, ಸತ್ತೂರ, ಬೇಲೂರು, ರಾಮನಕೊಪ್ಪ ಕೈಗಾರಿಕಾ ಘಟಕಗಳಲ್ಲಿ ಒಟ್ಟು 2,180 ಕಾರ್ಖಾನೆಗಳನ್ನು ತಪಾಸಣೆ ನಡೆಸಿದ್ದಾರೆ.
ಕೆಲವು ಕಾರ್ಖಾನೆಗಳು ದಾಖಲೆಯಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆ ತೋರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಇಟ್ಟುಕೊಂಡಿರುವುದು ಕಂಡುಬಂದಿದೆ. ಅವರೆಲ್ಲ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದು, ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಕೆಲವು ಪ್ರಮುಖ ಕಾರ್ಖಾನೆಗಳ ಹೊರತಾಗಿ ಉಳಿದೆಲ್ಲ ಕಾರ್ಖಾನೆಗಳು ಪ್ರಥಮ ಚಿಕಿತ್ಸಾ ಉಪಕರಣಗಳನ್ನು ಸಹ ಇಟ್ಟುಕೊಳ್ಳದೆ ಇರುವುದು ವರದಿಯಲ್ಲಿ ನಮೂದಿಸಲಾಗಿದೆ.
Kshetra Samachara
17/08/2022 08:25 am