ಧಾರವಾಡ: ಒಂದಿಲ್ಲೊಂದು ಅವ್ಯವಹಾರದಲ್ಲಿ ಸಿಲುಕಿ ಸದಾ ಸುದ್ದಿಯಲ್ಲಿರುವ ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯ ಇದೀಗ ಮತ್ತೆ ಸುದ್ದಿ ಮಾಡುತ್ತಿದೆ.
ಹೌದು! 2014 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೌರ ವಿದ್ಯುತ್ ಘಟಕ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಂಡಿಕೇಟ್ ಮಾಜಿ ಸದಸ್ಯ ಜಯಂತ ಎಂಬುವವರು ಎಸಿಬಿಗೆ ದೂರು ನೀಡಿದ್ದರು.
ಅಂದಿನ ಕುಲಪತಿಯಾಗಿದ್ದ ಪ್ರೊ.ಎಚ್.ಬಿ.ವಾಲೀಕಾರ ಅವರು ಒಂದು ಕೋಟಿ ಐದು ಲಕ್ಷ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಜಯಂತ ಅವರು ದೂರಿನಲ್ಲಿ ಆರೋಪಿಸಿದ್ದರು. ವಾಲೀಕಾರ ವಿರುದ್ಧವೇ ಜಯಂತ ಅವರು ದೂರು ಸಲ್ಲಿಸಿದ್ದರು.
ಇದೀಗ ಸೌರ ವಿದ್ಯುತ್ ಘಟಕ ನಿರ್ಮಾಣ ಕುರಿತು ವಿಚಾರಣೆ ನಡೆಸುವಂತೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ವಾಲೀಕಾರ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲೇ ಹಲವು ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು. ಇದೀಗ ಮತ್ತೇ ಅವರು ಕಂಟಕ ಎದುರಿಸುವಂತಾಗಿದೆ.
ಒಂದು ಕೋಟಿ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಲೇಟ್ ಅಳವಡಿಸಲಾಗಿದೆ. 100 ಕಿಲೋ ವ್ಯಾಟ್ ವಿದ್ಯುತ್‌ನ್ನು ಈ ಸೋಲಾರ್ ಪ್ಲೇಟ್‌ಗಳು ತಯಾರಿಸಬೇಕಿತ್ತು. ಆದರೆ, ಇಷ್ಟು ವೆಚ್ಚದಲ್ಲಿ ಸೋಲಾರ್ ಪ್ಲೇಟ್ ಅಳವಡಿಕೆಯಾಗಿಲ್ಲ ಎಂಬುದು ಆರೋಪವಾಗಿದೆ. ಈ ಸಂಬಂಧ 2020ರ ಡಿಸೆಂಬರ್ 30 ರಂದು ಜಯಂತ ಅವರು ರಾಜ್ಯಪಾಲರಿಗೂ ದೂರು ಸಲ್ಲಿಸಿದ್ದರು. ರಾಜ್ಯಪಾಲರ ಆದೇಶದ ಮೇರೆಗೆ ಎಸಿಬಿ ಅಧಿಕಾರಿಗಳು ಇದೀಗ ತನಿಖೆಗೆ ಮುಂದಾಗಿದ್ದಾರೆ. ಒಟ್ಟಾರೆಯಾಗಿ ನಿವೃತ್ತ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ಅವರಿಗೆ ಮತ್ತೊಂದು ಕಂಟಕ ಎದುರಾದಂತಾಗಿದೆ.
Kshetra Samachara
03/01/2022 10:05 am