ಹುಬ್ಬಳ್ಳಿ: ಬ್ಯಾಂಕ್ ಸಿಬ್ಬಂದಿ ಹೆಸರಲ್ಲಿನ ಕರೆ ಮಾಡಿ ದಂಪತಿಯ ಜಂಟಿ ಖಾತೆಯಲ್ಲಿದ್ದ ಬರೊಬ್ಬರಿ 3 ಲಕ್ಷ ರೂ. ಹಣವನ್ನು ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ.
ಗೋಕುಲ ರಸ್ತೆಯ ರಾಜೇಶ್ವರಿ ಮತ್ತು ಅವರ ಪತಿ ಶಶಿಧರ ಹೆಸರಿನಲ್ಲಿದ್ದ ಬ್ಯಾಂಕ್‌ನ ಜಂಟಿ ಖಾತೆಯಿಂದ 3 ಲಕ್ಷ ರೂ. ದೋಚಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿ ನಂಬಿಸಿದ್ದಾನೆ. ಅಮೆರಿಕದ ಬ್ಯಾಂಕ್‌ವೊಂದರ ಸಿಬ್ಬಂದಿ ಆಗಿರುವ ರಾಜೇಶ್ವರಿ ಅವರು ಪತಿ ಹೆಸರಲ್ಲಿ ಜಂಟಿ ಖಾತೆ ತೆರೆದು, ಹಣ ಜಮಾ ಮಾಡುತ್ತಿದ್ದರು.
ಪತಿ ಶಶಿಧರ ಅವರು ಮೊಬೈಲ್ ನಲ್ಲಿ ನೆಟ್ ಬ್ಯಾಂಕಿಂಗ್ ಕೆಲಸ ಮಾಡುತ್ತಿಲ್ಲವೆಂದು, ಗೂಗಲ್‌ನಲ್ಲಿ ದೊರೆತ ಬ್ಯಾಂಕ್ ಹೆಸರಿನ ಗ್ರಾಹಕರ ಸೇವಾ ಕೇಂದ್ರದ ನಂಬರ್‌ಗೆ ಕರೆ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿದ ವಂಚಕ ಸಿಟಿ ಬ್ಯಾಂಕ್ ಕಸ್ಟಮರ್ ಸಪೋರ್ಟ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಹೇಳಿ ಲಿಂಕ್ ಕಳುಹಿಸಿದ್ದಾನೆ. ಇದನ್ನು ನಂಬಿ ಆ್ಯಪ್ ಡೌನ್ ಮಾಡಿದ್ದಾರೆ. ನಂತರ ಖಾತೆಯಲ್ಲಿದ್ದ 3 ಲಕ್ಷ ರೂ. ಲಪಟಾಯಿಸಿದ್ದಾನೆ.
ಹಣ ಬೇರೊಂದು ಖಾತೆಗೆ ವರ್ಗಾವಣೆಯಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ಇಲ್ಲಿನ ಸೈಬರ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
14/06/2022 09:00 am