ಧಾರವಾಡ: ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ದೂರು ನೀಡಿದ್ದರೂ ಧಾರವಾಡದ ಮಹಿಳಾ ಠಾಣೆ ಪೊಲೀಸರು ಆ ದೂರನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ನೊಂದ ತಂದೆ ಧಾರವಾಡದ ಮಹಿಳಾ ಪೊಲೀಸ್ ಠಾಣೆ ಎದುರೇ ರಂಪಾಟ ಮಾಡಿದ ಘಟನೆ ಗುರುವಾರ ನಡೆದಿದೆ.
ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಮುದಪ್ಪ ಜಂಗಳಿ ಎಂಬಾತನ ಪುತ್ರಿ ಬಸಮ್ಮ (20) ಎಂಬಾಕೆಯನ್ನು ಬೈಲಹೊಂಗಲದ ಮಡ್ಡಿಗಿರಿಯಾಲದ ಗಂಗಪ್ಪ ಚುರಮರಿ ಎಂಬಾತ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಕಳೆದ ಐದು ತಿಂಗಳ ಹಿಂದೆಯೇ ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿದ್ದರೂ ಠಾಣೆಯವರು ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ತನ್ನ ಮಗಳನ್ನು ಹುಡುಕಿಕೊಡುವ ಕೆಲಸವನ್ನೂ ಮಾಡಿಲ್ಲ ಎಂದು ಮುದ್ದಪ್ಪ ಜಂಗಳಿ ಆರೋಪಿಸಿದರು.
ಜುಲೈ 23 ರಂದು ತನ್ನ ಮಗಳು ಅಪಹರಣವಾಗಿದ್ದರ ಬಗ್ಗೆ ದೂರು ದಾಖಲು ಮಾಡಿರುವ ಮುದ್ದಪ್ಪ, ಆಕೆಯ ಮದುವೆಯಾಗಿದ್ದರ ಬಗ್ಗೆ ದಾಖಲೆಯನ್ನಾದರೂ ಪೂರೈಕೆ ಮಾಡಲು ಹೇಳಿ ಎಂದು ಕೇಳಿದರೂ ಠಾಣೆಯವರು ಕ್ಯಾರೆ ಎನ್ನುತ್ತಿಲ್ಲ. ಐದು ತಿಂಗಳಿನಿಂದ ಪ್ರತಿನಿತ್ಯ ಠಾಣೆಗೆ ಅಲೆದಾಡುತ್ತಿದ್ದರೂ ಯಾರೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಾಜೇಶ್ವರಿ ತಿಳಿಸಿದರು.
ಈ ದೂರು ದಾಖಲು ಮಾಡಿದ್ದಕ್ಕೆ ಮುದ್ದಪ್ಪನಿಗೆ ಮಡ್ಡಿಗಿರಿಯಾಲದ ಸಂಬಂಧಿಕರಿಂದ ಧಮ್ಕಿ ಕೂಡ ಬರುತ್ತಿದೆಯಂತೆ. ರಕ್ಷಣೆ ನೀಡಬೇಕಾದ ಪೊಲೀಸರೆ ಈ ರೀತಿ ಕೈಚೆಲ್ಲಿ ಕುಳಿತಿರುವಾಗ ನೊಂದ ಆ ತಂದೆ ನ್ಯಾಯ ಕೊಡುವವರಾದರೂ ಯಾರು ಎಂಬ ಪ್ರಶ್ನೆ ಎದುರಾಗಿದೆ.
Kshetra Samachara
10/12/2020 08:01 pm