ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಾವು, ಅವರ ಅಭಿಮಾನಿಗಳಲ್ಲಷ್ಟೇ ಅಲ್ಲ, ಇಡೀ ಕರುನಾಡಿನ ಜನರಿಗೆ ಅತೀವ ನೋವು ತರಿಸಿದೆ. ಪುನೀತ್ ಅವರು ಸಾವನ್ನಪ್ಪಿದ್ದಾರೆ ಎಂಬ ವಿಷಯವನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಪುನೀತ್ ಅವರ ಅಭಿಮಾನಿಗಳಲ್ಲೊಬ್ಬರಾದ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಣಿ ಪಾಟೀಲ ಅವರು ಪುನೀತ್ ಅವರ ಅಪ್ಪಟ ಅಭಿಮಾನಿ. ಅವರ ಮೇಲಿನ ಅಭಿಮಾನಕ್ಕಾಗಿ ದ್ರಾಕ್ಷಾಯಣಿ ಅವರು ಮನಗುಂಡಿ ಗ್ರಾಮದಿಂದ ಪುನೀತ್ ಸಮಾಧಿವರೆಗೂ ಓಟ ಆರಂಭಿಸಿದ್ದಾರೆ.
ಹೀಗೆ ಓಡುತ್ತಿರುವ ದ್ರಾಕ್ಷಾಯಣಿ ಮೂಲತಃ ಕ್ರೀಡಾಪಟು. ಅಲ್ಲದೇ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಮೂರು ಮಕ್ಕಳ ತಾಯಿಯಾಗಿರುವ ದ್ರಾಕ್ಷಾಯಣಿ ಕಾಲೇಜಿನಲ್ಲಿದ್ದಾಗ ಉತ್ತಮ ಕ್ರೀಡಾಪಟುವಾಗಿದ್ದರು. ಸದ್ಯ ಓಡುವ ಮೂಲಕವೇ ಪುನೀತ್ ಸಮಾಧಿ ದರ್ಶನ ಮಾಡಲು ನಿರ್ಧರಿಸಿರುವ ದ್ರಾಕ್ಷಾಯಣಿ ಇಂದಿನಿಂದ ಓಡಲು ಆರಂಭಿಸಿದ್ದಾರೆ. ಸುಮಾರು 500 ಕಿಲೋ ಮೀಟರ್ ದೂರವನ್ನು ಓಡಿಯೇ ತಲುಪಲು ನಿರ್ಧರಿಸಿರುವ ಇವರು, ಪುನೀತ್ ಅವರ ಮೇಲೆ ತಮ್ಮ ಅಭಿಮಾನ ಎಷ್ಟಿತ್ತು ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.
ಪುನೀತ್ ಅವರ ಅಭಿಮಾನಿಯಾಗಿರುವ ದ್ರಾಕ್ಷಾಯಣಿ, ಒಮ್ಮೆಯೂ ಅವರನ್ನು ಭೇಟಿ ಮಾಡಿರಲಿಲ್ಲ. ಈಗ ಸುಮ್ಮನೆ ಅವರ ಸಮಾಧಿ ದರ್ಶನಕ್ಕೆ ಹೋಗುವ ಬದಲಿಗೆ, ಪುನೀತ್ ಅವರ ಆದರ್ಶಗಳ ಬಗ್ಗೆ ಜನರಿಗೆ ತಿಳಿಸುತ್ತ ಅವರ ಸಮಾಧಿ ದರ್ಶನ ಮಾಡಲು ಹೊರಟಿದ್ದಾರೆ.
ದಿನಕ್ಕೆ 40 ಕಿಲೋ ಮೀಟರ್ ಓಡುವ ಗುರಿ ಹೊಂದಿರುವ ಇವರು, ದಾರಿ ಮಧ್ಯೆ ನೇತ್ರದಾನ, ರಕ್ತದಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಇವರ ಪತಿ ಉಮೇಶ ಪಾಟೀಲ ಸಹ ಇವರೊಂದಿಗೆ ವಾಹನದಲ್ಲಿ ಹಿಂಬಾಲಿಸಲಿದ್ದು, ಜೊತೆಗೆ ಮೂರು ಮಕ್ಕಳು ಹಾಗೂ ತಾಯಿ ಸಹ ಇದ್ದಾರೆ. ಆದರೆ, ದ್ರಾಕ್ಷಾಯಣಿ ಒಬ್ಬರೇ ಓಡುತ್ತ ಸಾಗುತ್ತಿದ್ದಾರೆ ಪತ್ನಿಯ ಈ ವಿಶೇಷ ಸಾಹಸಕ್ಕೆ ಸಾಥ್ ನೀಡೋದಕ್ಕಾಗಿಯೇ ಪತಿ, ತನ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದಾರಂತೆ. ಈಗಾಗಲೇ ಸಾಕಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಊರಿಗೆ ಕೀರ್ತಿ ತಂದಿರುವ ದ್ರಾಕ್ಷಾಯಣಿ ಈಗ ಇಂತಹ ಒಂದು ಕಾರ್ಯಕ್ಕೆ ಮುಂದಾಗಿರೋದು ನಮ್ಮ ಊರಿನ ಹೆಮ್ಮೆ ಎಂದು ಗ್ರಾಮಸ್ಥರು ಕೊಂಡಾಡುತ್ತಿದ್ದಾರೆ.
Kshetra Samachara
29/11/2021 06:35 pm