ಕಳೆದ 4 ದಿನಗಳಿಂದ ನಡೆಯುತ್ತಿದ್ದ ಧಾರವಾಡದ ಕೃಷಿ ಮೇಳಕ್ಕೆ ಇಂದು ಸಂಭ್ರಮದ ತೆರೆ ಬಿದ್ದಿದೆ. ರೈತರಿಗೆ ನೀಡಬೇಕಾದ ಹಲವಾರು ವಿಷಯಗಳನ್ನು ನೀಡುವುದರ ಜೊತೆಗೆ ವೈಜ್ಞಾನಿಕ ಕೃಷಿ ಅಳವಡಿಕೆ ಬಗ್ಗೆ ರೈತರು ತಿಳಿದುಕೊಂಡರು. ಕೊನೆಯ ದಿನ ರೈತರು ಹೆಚ್ಚಾಗಿ ತೊಡಗಿಸಿಕೊಂಡಿದ್ದೇ ವೈಜ್ಞಾನಿಕ ಯಂತ್ರೋಪಕರಣಗಳಲ್ಲಿ.
ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ರದ್ದಾಗಿದ್ದ ಧಾರವಾಡದ ಕೃಷಿ ಮೇಳ ಈ ವರ್ಷ ಅದ್ಧೂರಿಯಾಗಿ ನಡೆಯಿತು. ರೈತರ ಆದಾಯ ದ್ವಿಗುಣ ಎನ್ನುವ ಘೋಷದೊಂದಿಗೆ ಆರಂಭವಾದ ಈ ಕೃಷಿ ಮೇಳವನ್ನು ಸಂಪೂರ್ಣವಾಗಿ ರೈತರಿಗಾಗಿ ಮೀಸಲಿಡಲಾಗಿತ್ತು. ಹೊಸ ಹೊಸ ಕೃಷಿ ತಳಿಗಳ ಪ್ರದರ್ಶನ ಸೇರಿದಂತೆ ರೈತನ ಬದುಕು ಮತ್ತಷ್ಟು ಹಸನಾಗಲು ನೀರಾವರಿ ಪದ್ಧತಿ, ಕೀಟಗಳ ತಡೆಗಟ್ಟುವಿಕೆ, ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಯಾವ ರೀತಿ ಇರಬೇಕು ಎನ್ನುವುದರ ಬಗ್ಗೆ ರೈತರಿಗೆ ಅರಿವು ಮೂಡಿಸಲಾಯಿತು. ವಿವಿಧ ರೀತಿಯ ಯಂತ್ರೋಪಕರಣಗಳು ಈ ಬಾರಿಯ ಪ್ರದರ್ಶನಕ್ಕೆ ಆಗಮಿಸಿದ್ದು ವಿವಿಧ ಯಂತ್ರೋಪಕರಣಗಳನ್ನು ಖರೀದಿಸಲು ರೈತರು ಮುಗಿಬಿದ್ದಿದ್ದರು. ನಾಲ್ಕು ದಿನಗಳ ಕೃಷಿ ಮೇಳದ ಬಗ್ಗೆ ರೈತರು ಏನು ಹೇಳಿದ್ದಾರೆ ಕೇಳೋಣ ಬನ್ನಿ.
ರೈತರು ಕೂಡ ವೈಜ್ಞಾನಿಕ ಕೃಷಿ ಮಾಡಲು ಮುಂದಾಗಿದ್ದು, ತಂತ್ರಜ್ಞಾನದ ಮೂಲಕ ಹೆಚ್ಚು ಇಳುವರಿ ಹಾಗೂ ಕಡಿಮೆ ಸಮಯದಲ್ಲಿ ಕೃಷಿ ಕಾರ್ಯ ಮುಗಿಸಬೇಕು ಎನ್ನುವ ಕಾರಣಕ್ಕೆ ವಿವಿಧ ಯಂತ್ರಗಳ ಮೊರೆಹೋಗಿದ್ದಾರೆ. ಒಟ್ಟಾರೆ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳ ಯಶಸ್ವಿಯಾಗಿದ್ದು, ಸುಮಾರು 9 ಲಕ್ಷಕ್ಕಿಂತಲೂ ಅಧಿಕ ರೈತರು ಕೃಷಿ ಮೇಳದ ಸದುಪಯೋಗ ಪಡೆದುಕೊಂಡರು.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/09/2022 08:24 pm