ಹುಬ್ಬಳ್ಳಿ: ಅವರೆಲ್ಲರೂ ಸಾಲ ಮಾಡಿ ಬೀಜ ಗೊಬ್ಬರ ಹಾಕಿ ಬೆಳೆ ಬೆಳೆದಿದ್ದ ಅನ್ನದಾತರು. ಇನ್ನೆನೂ ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿಯೇ ತುತ್ತು ಕೈ ಜಾರಿ ಕೆಳಗೆ ಬಿದ್ದಂತಾಗಿದೆ. ವರುಣನ ವಕ್ರದೃಷ್ಟಿಯಿಂದ ಅನ್ನದಾತ ಕಂಗಾಲಾಗಿದ್ದು, ಕೃಷಿಗೆ ಮಾಡಿದ ಸಾಲವನ್ನು ತೀರಿಸಲಾಗದ ಸ್ಥಿತಿಗೆ ಬಂದು ನಿಂತಿದ್ದಾನೆ.
ಈಗಾಗಲೇ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಗೆ ರೈತ ಬೆಳೆ ಹಾಳಾಗಿದೆ. ಹೆಸರು, ಮೆಣಸಿನಕಾಯಿ, ಹತ್ತಿ, ಉದ್ದು ಹೀಗೆ ಅನ್ನದಾತನ ನೀರಿಕ್ಷೆಯಲ್ಲಿದ್ದ ಬೆಳೆಯಲ್ಲ ಹಾಳಾಗಿದ್ದು, ಅನ್ನದಾತ ಕಣ್ಣೀರು ಹಾಕುವಂತಾಗಿದೆ. ಹುಬ್ಬಳ್ಳಿ ತಾಲ್ಲೂಕಿನ ನಲವಡಿ ಹಾಗೂ ಶಿರಗುಪ್ಪಿ ಹತ್ತಿರದ ಅತಿವೃಷ್ಟಿ ಬಾಧಿತ ಹೊಲಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉತ್ತಮ ಮಳೆ ಆಗಿದೆ ಅಂತ ಖುಷಿಯಿಂದ ಇದ್ದ ರೈತನ ಬದುಕಿನಲ್ಲಿ ಮಳೆರಾಯ ಆಟ ಆಡಿದ್ದು, ಇತ್ತೀಚೆಗೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನಿರೀಕ್ಷಿತ ಮಳೆಯಿಂದ ಕಾಳು ಕಟ್ಟುವ ಹಂತದಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 2.73 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 89,148 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ.
ಇನ್ನೂ 61,566 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. 916 ಹೆಕ್ಟೇರ್ ಉದ್ದು ಹಾನಿಯಾಗಿದೆ. ಅಧಿಕಾರಿಗಳು ಸರ್ವೆ ರಿಪೋರ್ಟ್ ಸಿದ್ಧಪಡಿಸಿದ್ದಾರೆ. ಎನ್.ಡಿ.ಆರ್.ಎಫ್ ನಿಯಮಗಳ ಅನ್ವಯ ಪರಿಹಾರ ಕೊಡಲಾಗುವುದು. ರಾಜ್ಯ ಸರ್ಕಾರದ ನೆರವೂ ಸೇರಿ ಪ್ರತಿ ಹೆಕ್ಟೇರ್ ಗೆ 13,600 ಪರಿಹಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಆದರೆ ಸರ್ಕಾರ ನೀಡುವ ಆರು ಕಾಸು ಮೂರು ಕಾಸು ಪರಿಹಾರ ರೈತನ ಪರಿವಾರ ಸರಿದೂಗಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಬೆಳೆ ವಿಮೆಯನ್ನು ಸಮರ್ಪಕವಾಗಿ ತಲುಪಿಸಬೇಕು ಎಂಬುವುದು ಅನ್ನದಾತನ ಒತ್ತಾಯ.
ಒಟ್ಟಿನಲ್ಲಿ ರೈತರು 1,48,166 ಬೆಳೆ ವಿಮೆ ಹಣ ಕಟ್ಟಿದ್ದಾರೆ. ಈ ಬಗ್ಗೆ ಸರ್ಕಾರ ಮುತುವರ್ಜಿಯಿಂದ ಮತ್ತಷ್ಟು ಪರಿಹಾರ ಒದಗಿಸುವ ಮೂಲಕ ಅನ್ನದಾತನ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
11/08/2022 06:33 pm